ಬಂಟ ಕಲಾ ಸಂಭ್ರಮ ಭಾರತ ದರ್ಶನ ಸ್ಪರ್ಧೆ: ಸುರತ್ಕಲ್ ಬಂಟರ ಸಂಘ ಪ್ರಥಮ
ಮಂಗಳೂರು, ಸೆ.4: ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಗರದ ಬಂಟ್ಸ್ ಹಾಸ್ಟೇಲ್‌ನ ಓಂಕಾರ ನಗರದಲ್ಲಿ ‘ಬಂಟ ಕಲಾ ಸಂಭ್ರಮ ಭಾರತ ದರ್ಶನ ಕಲ್ಪನೆಯ ಸ್ಪರ್ಧೆ ನಡೆಯಿತು.
ಈ ಸ್ಪರ್ಧೆಯಲ್ಲಿ ರಾಜೇಶ್ವರಿ ಡಿ. ಶೆಟ್ಟಿ ನಿರ್ದೇಶನದಲ್ಲಿ ಸುರತ್ಕಲ್ ಬಂಟರ ಸಂಘ ಪ್ರದರ್ಶಿಸಿದ ಭಾರತ ದರ್ಶನ ಪ್ರಹಸನ 1ಲಕ್ಷ ರೂ. ನಗದು ಸಹಿತ ಶಾಶ್ವತ ಫಲಕದೊಂದಿಗೆ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬೆಳ್ತಂಗಡಿ ಬಂಟರ ಸಂಘ ದ್ವಿತೀಯ ಹಾಗೂ ಉಳ್ಳಾಲ ಬಂಟರ ಸಂಘ ತೃತೀಯ ಪ್ರಶಸ್ತಿಯನ್ನು ಪಡೆಯಿತು.
ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಪ್ರಶಸ್ತಿ ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಮತ್ತು ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ ಹಾಗೂ ಪದಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆಎಂ ಶೆಟ್ಟಿ, ಕೋಶಾಧಿ ಕಾರಿ ರಾಮಮೋಹನ್ ರೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಉದ್ಯಮಿಗಳಾದ ಲಕ್ಷ್ಮೀಶ ಭಂಡಾರಿ, ಗಿರೀಶ್ ಶೆಟ್ಟಿ ಕಟೀಲು, ಗಣೇಶೋತ್ಸವ ಸಮಿತಿಯ ಜಿಲ್ಲಾ ಸಂಚಾಲಕ ನಾಗರಾಜ ಶೆಟ್ಟಿ, ಮುಣಿಯಾಲ್ ಉದಯಕುಮಾರ್ ಶೆಟ್ಟಿ, ಸುಧಾಕರ ಪೂಂಜ, ಆಶಾಜ್ಯೋತಿ ರೈ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಮೈಮ್ ರಮೇಶ್ ರಂಗಾಯಣ, ಸುರೇಂದ್ರನಾಥ ಶೆಟ್ಟಿ ಮಾರ್ನಾಡ್, ಅವಿನಾಶ್ ಕಾಮತ್ ಸಹಕರಿಸಿದ್ದರು. ಕಿರಣ್ ಪಕ್ಕಳ, ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರೂಪಿಸಿದರು.
205 ಮಂದಿಯ ಸುರತ್ಕಲ್ ತಂಡ
ಸುರತ್ಕಲ್ ಬಂಟರ ಸಂಘ ತುಂಗಭದ್ರಾ ಹೆಸರಿನಲ್ಲಿ ಪ್ರಸ್ತುತ ಪಡಿಸಿದ ಕಲಾಹಂದರದಲ್ಲಿ ಭರತರಾಜನಿಂದ ನಮ್ಮ ರಾಷ್ಟ್ರ ಭಾರತವಾಯಿತು ಎಂಬ ನೃತ್ಯದ ಮೂಲಕ ಪ್ರಾರಂಭಗೊಂಡು ದಟ್ಟಡವಿಗಳಲ್ಲಿ, ಕಣಿವೆಗಳಲ್ಲಿ ನಮ್ಮಲ್ಲಿರುವ ನೂರಾರು ಬುಡಕಟ್ಟು ಜನಾಂಗದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿಯನ್ನು ನಾಗರಿಕ ಸಮಾಜ ಹೊರಬೇಕು ಎನ್ನುವ ಸಂದೇಶದ ಜೊತೆಗೆ ಆಧುನಿಕತೆಯ ಸೋಗಿನಲ್ಲಿ ಬುಡಕಟ್ಟು ಜನಾಂಗದವರ ಸಾಂಸ್ಕೃತಿಕ ವೈಭವ ನಶಿಸಿ ಹೋಗಬಾರದು ಎಂದು ಪ್ರಹಸನದ ಮೂಲಕ ಸಮಾಜಕ್ಕೆ ಸಂದೇಶವನ್ನು ಸಾರಲಾಲಾಯಿತು.
ರಾಜೇಶ್ವರಿ ಡಿ. ಶೆಟ್ಟಿ ರಚಿಸಿ, ನಿರ್ದೇಶಿಸಿದ ಕತೆಗೆ ವಿನೋದ್ ಶೆಟ್ಟಿ ಸಾಥ್ ನೀಡಿದರು. ರಜತ್ ಸಸಿಹಿತ್ಲು ಮತ್ತು ದೀಕ್ಷಾ ನೃತ್ಯ ಸಂಯೋಜನೆ ಮಾಡಿದ್ದರು. 25 ನಿಮಿಷಗಳ ಭಾರತ ದರ್ಶನ ಪ್ರಹಸನದಲ್ಲಿ 70 ಪುಟಾಣಿಗಳೊಂದಿಗೆ 205 ಮಂದಿ ಕಲಾವಿದರು ಭಾಗವಹಿಸಿದ್ದರು.