×
Ad

ಬಂಟ್ವಾಳ: ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ, ಕ್ರೀಡಾಕೂಟ ಹಾಗೂ ಮಿಲಾದ್ ಫೆಸ್ಟ್

Update: 2025-12-23 22:56 IST

ಬಂಟ್ವಾಳ : ಇಲ್ಲಿನ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ, ಕ್ರೀಡಾಕೂಟ ಹಾಗೂ ಮಿಲಾದ್ ಪೆಸ್ಟ್ ಕಾರ್ಯಕ್ರಮ ಇತ್ತೀಚೆಗೆ ಶಾಲಾ ಆವರಣದಲ್ಲಿ ನಡೆಯಿತು.

ವಾರ್ಷಿಕ ಕ್ರೀಡಾಕೂಟದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಹನೀಫ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ಅಗ್ನಿಶಾಮಕ ಠಾಣಾಧಿಕಾರಿ ಹರೀಶ್, ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಇಮ್ಮಿಯಾಝ್ ಗೋಳ್ತಮಜಲು ಕ್ರೀಡಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಮಿಲಾದ್ ಪೆಸ್ಟ್ ಕಾರ್ಯಕ್ರಮವು ಶಾಲಾ ಸಂಚಾಲಕ ಹಾಜಿ ಅಬ್ದುಲ್ ರಹಮಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೌಲಾನ ಅಬ್ದುಲ್ ಸಲಾಂ ಯಾಮನಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೌಲಾನ ಸಿರಾಜುದ್ದೀನ್ ಮದನಿ ಮಾತನಾಡಿ ಶುಭ ಹಾರೈಸಿದರು. ಮದ್ರಸ ಮುಖ್ಯ ಶಿಕ್ಷಕ ಅಬ್ದುಲ್ ಮಜೀದ್ ಪೈಝಿ ಉಪಸ್ಥಿತರಿದ್ದರು.

ಶಾಲಾಡಳಿತ ಸಮಿತಿ ಅಧ್ಯಕ್ಷ ಅಡ್ವಕೇಟ್ ರಿಯಾಝ್ ಹುಸೈನ್‌ ರವರ ಅಧ್ಯಕ್ಷತೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ದಾರವಾಡ ವಿಶ್ವಾವಿದ್ಯಾಲಯದ ಉಪಕುಲಪತಿ ಎ.ಎಂ.ಖಾನ್ ಅತಿಥಿಗಳಾಗಿ ಭಾಗವಹಿಸಿದ್ದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಜಿ ಬಿ. ಎಚ್. ಖಾದರ್ ಬಂಟ್ವಾಳ, ಹಾಜಿ ಕಣಚೂರು ಮೋನು, ದುಬಾಯಿ ಉದ್ಯಮಿ ಇಬ್ರಾಹಿಂ ಗಡಿಯಾರ್, ರಿಯಾಝ್ ಫರಂಗಿಪೇಟೆ, ಶೈಕ್ಷಣಿಕ ಸಂಯೋಜಕಿ ಪ್ರತಿಮಾ, ಸಂಪನ್ಮೂಲ ಅಧಿಕಾರಿ ಸುರೇಖ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭ  ಕರ್ನಾಟಕ ಬ್ಯಾಂಕ್ ವತಿಯಿಂದ ಶಾಲೆಗೆ ಕೊಡುಗೆಯಾಗಿ ನೀಡಲಾದ ಬಸ್ಸನ್ನು ಬ್ಯಾಂಕಿನ ಅಧಿಕಾರಿ ವಿಶ್ವನಾಥ್ ಅವರು ಹಸ್ತಾಂತರಿಸಿದರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಬಿ. ಎಚ್. ಖಾದರ್ ಬಂಟ್ವಾಳ ಇವರನ್ನು ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ 2024-25ನೇ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ತಲಾ 5000 ರೂಪಾಯಿ ದೇಣಿಗೆಯಾಗಿ ನೀಡಿದ ಇಕ್ಬಾಲ್ ಬಾವ ಅವರನ್ನು ಸ್ಮರಿಸಲಾಯಿತು.

ಶಾಲಾ ಆಡಳಿತ ಸಮಿತಿ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾಸ್ಟರ್ ಸ್ವಾಗತಿಸಿ, ಶಾಲಾಡಳಿತ ಸಮಿತಿ ಸದಸ್ಯ, ಬಂಟ್ವಾಳ ಪುರಸಭೆಯ ನಿಕಟಪೂರ್ವ ಉಪಾಧ್ಯಕ್ಷ ಮೋನಿಸ್ ಆಲಿ ಪ್ರಸ್ತಾವನೆಗೈದರು. ಶಾಲಾ ಮುಖ್ಯ ಶಿಕ್ಷಕ ಇಬ್ರಾಹಿಂ ಸಲೀಂ ಪಿ ವಾರ್ಷಿಕ ವರದಿ ವಾಚಿಸಿದರು.

ನಿಶ್ಮಿತಾ, ಸಲ್ಮಾ ಶಿರಿನ್ ಹಾಗೂ ಆಶಿಯಾ ಅಫ್ರಾ ವಿವಿಧ ಕಾರ್ಯಕ್ರಮ ನಿರೂಪಿಸಿದರು, ಸಹ ಮುಖ್ಯ ಶಿಕ್ಷಕಿ ರಚನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News