×
Ad

ಗೃಹ ಲಕ್ಷ್ಮಿ ಯೋಜನೆಗೆ 59,000 ಫಲಾನುಭವಿಗಳ ತಾಂತ್ರಿಕ ಸಮಸ್ಯೆ ಶೀಘ್ರ ನಿವಾರಣೆ: ಎಚ್.ಎಂ .ರೇವಣ್ಣ

Update: 2025-12-23 21:15 IST

ಮಂಗಳೂರು: ರಾಜ್ಯ ಸರಕಾರ ಜನಸಾಮಾನ್ಯರ ಆರ್ಥಿಕ ಬದುಕಿಗೆ ಒತ್ತುಕೊಟ್ಟು, ಅವರನ್ನು ಆರ್ಥಿಕ ಸಬಲರನ್ನಾಗಿಸಿದೆ. ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆಯಲು ಜಿಎಸ್‌ಟಿ ಸೇರಿದಂತೆ ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವವರ ಪೈಕಿ 59, 000 ಮಂದಿಯ ಸಮಸ್ಯೆ ನಿವಾರಣೆಯಾಗಿ ಅವರಿಗೆ ಶೀಘ್ರದಲ್ಲೇ ಈ ಯೋಜನೆಯಡಿ ಸೌಲಭ್ಯ ದೊರೆಯಲಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ .ರೇವಣ್ಣ ತಿಳಿಸಿದ್ದಾರೆ.

ನಗರದ ಪುರಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಕಾರ್ಯಾಗಾರ ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಗೃಹ ಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತಿದ್ದು, ಈ ಪೈಕಿ ಕೆಲವು ಮಂದಿ ನಿಧನರಾಗಿದ್ದರೂ ಅವರ ಖಾತೆಗೆ ಹಣ ಜಮೆಯಾಗಿರುವ ಪ್ರಕರಣಗಳು ಕಂಡು ಬಂದಿದ್ದು, ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಹಣವನ್ನು ವಾಪಸ್ ಪಡೆಯಲಾಗುವುದು. ದ.ಕ. ಜಿಲ್ಲೆಯಲ್ಲಿ ಆ ರೀತಿಯ ಪ್ರಕರಣಗಳನ್ನು ಪತ್ತೆ ಹಚ್ಚಿ ವಾಪಸ್ ಪಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

18 ಜಿಲ್ಲೆಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಕಾರ್ಯಾಗಾರ ನಡೆಸಲಾಗಿದೆ. ಮಂಗಳೂರಿನಲ್ಲಿ ಪಂಚ ಗ್ಯಾರಂಟಿ ಯೋಜನೆಯ ಯಕ್ಷಗಾನ ನೋಡಿ ಖುಶಿ ಕೊಟ್ಟಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಗೃತ ಕರ್ನಾಟಕ ಸಂಚಾಲಕ ಡಾ.ವಾಸು ಎಚ್.ವಿ. ಮಾತನಾಡಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಯಾಗುತ್ತದೆಯೇ ಹೊರತು ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಅವರು ‘ ನಮ್ಮ ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಜಾರಿಗೊಳಿಸಿದ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾದವರು ಮುಂದೆ ಬರಲು ಹೆದರುತ್ತಿದ್ದಾರೆ. ಆದರೆ ಅವರು ಫಲಾನುಭವಿಗಳು ಎಂದು ಎದೆ ತಟ್ಟಿ ಹೇಳಬೇಕು. ಸರಕಾರ ನೀಡಿರುವುದು ಬಿಟ್ಟಿ ಭಾಗ್ಯವಲ್ಲ ಎಂದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮೈಸೂರು ವಿಭಾಗದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಮಾತನಾಡಿ ‘ರಾಜ್ಯದಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮರ್ಪಕ ವಾಗಿ ಆಗಿದೆ. ಚುನಾವಣೆ ಮೊದಲು ನೀಡಿದ ಎಲ್ಲ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಿದೆ. ಆದರೆ ಮೀಸಲಾತಿ, ಪೆಟ್ರೋಲ್ ,ಡಿಸೇಲ್,ಗ್ಯಾಸ್ , ಚಿನ್ನ ಬೆಲೆ ಇಳಿಕೆ ಮಾಡುತ್ತೇವೆಂದು ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ ಏನನ್ನು ಮಾಡದೆ ಜನರಿಗೆ ಮೋಸ ಮಾಡಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ,ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂಎ. ಗಫೂರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿಎಸ್ ಗಟ್ಟಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿಎಂ ಶಹೀದ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಉಡುಪಿ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೊಡವೂರು, ದ.ಕ.ಜಿ.ಪಂ ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ವಿವಿಧ ತಾಲೂಕು ಸಮಿತಿಗಳ ಅಧ್ಯಕ್ಷರುಗಳಾದ ಜಯಂತಿ ಬಿ.ಎ, ಉಮಾನಾಥ ಶೆಟ್ಟಿ, ಪದ್ಮನಾಭ ಸಾಲ್ಯಾನ್, ಆಲ್ವಿನ್ ಕ್ಲೆಮೆಂಟ್ ಕುಟಿನ್ಹಾ , ಶಾಹುಲ್ ಹಮೀದ್, ಸುಧೀರ್ ಕುಮಾರ್ ಶೆಟ್ಟಿ, ಸುರೇಂದ್ರ ಬಿ. ಕಂಬಳಿ, ಅರುಣ್ ಕುಮಾರ್ ಶೆಟ್ಟಿ, ಎಸ್.ರಫೀಕ್ ಉಪಸ್ಥಿತರಿದ್ದರು.

ಯುವನಿಧಿಯ ಫಲಾನುಭವಿ ಡಾ.ಸುಷ್ಮಾ ಪುತ್ತೂರು ಮತ್ತು ನಾಲ್ಕು ಯೋಜನೆಗಳ ಫಲಾನುಭವಿ ಪ್ಲೇವಿ ಡಿ ಸೋಜ ಅಡ್ಯಾರ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News