ಕಂಚಿನಡ್ಕದಲ್ಲಿ ಟೋಲ್‌ಗೇಟ್ ನಿರ್ಮಾಣ ವಿರುದ್ಧ ಪ್ರತಿಭಟನೆಗೆ ಕೆನರಾ ಬಸ್ ಮಾಲಕ ಸಂಘ ಬೆಂಬಲ
ಮಂಗಳೂರು,ಆ.20: ಪಡುಬಿದ್ರೆ- ಕಾರ್ಕಳ ರಸ್ತೆ ಕಂಚಿನಡ್ಕದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸಾರ್ವಜನಿಕರಿಗೆ ಹೊರೆಯಾಗುವ ‘ಟೋಲ್ ಗೇಟ್’ ರದ್ದು ಮಾಡುವಂತೆ ಆಗ್ರಹಿಸಿ ನಡೆಸುವ ಸಾರ್ವಜನಿಕರ ಹೋರಾಟಕ್ಕೆ ಕೆನರಾ ಬಸ್ ಸಂಘ ಬೆಂಬಲ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಸಂಘದ ಉಪಾಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಅವರು ಈಗಾಗಲೇ ಹೆಜಮಾಡಿಯ ಟೋಲ್‌ಗೇಟ್‌ಗೇಟ್‌ನಲ್ಲಿ ಸುಂಕ ಪಾವತಿಸುತ್ತಿರುವ ಬಸ್‌ಗಳಿಗೆ ಮತ್ತೆ ಇನ್ನೊಂದು ಕಡೆ ಸುಂಕ ಕಟ್ಟಲು ಸಾಧ್ಯವಿಲ್ಲ ಕಂಚಿನಡ್ಕ ಟೋಲ್‌ಗೇಟ್ ಸ್ಥಾಪನೆ ಮಾಡುವುದನ್ನು ವಿರೋಧಿಸಿ ಆಗಸ್ಟ್ 24ರಂದು ಪ್ರತಿಭಟನೆ ನಡೆಯಲಿದ್ದು ಇದಕ್ಕೆ ಬಸ್ ಮಾಲಕರ ಸಂಘ ಬೆಂಬಲ ನೀಡುತ್ತದೆ’’ ಎಂದು ಹೇಳಿದರು.
ಹೆಜಮಾಡಿಯಿಂದ ಕಂಚಿನಡ್ಕ 10 ಕಿ.ಮೀ ದೂರದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ಇನ್ನೊಂದು ಟೋಲ್‌ಗೇಟ್ ಸ್ಥಾಪನೆ ಸರಿಯಲ್ಲ. ಕೇಂದ್ರ ಸರಕಾರದ ನಿಯಮಗಳ ಅನ್ವಯ ಹೆದ್ದಾರಿಯಲ್ಲಿ 60 ಕಿಮೀ ಅಂತರದಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಲು ಅವಕಾಶವಿಲ್ಲ. 2018ರಲ್ಲಿ ಬೆಳ್ಮಣ್ಣು ಬಳಿ ಇದೇ ರೀತಿ ಟೋಲ್ ನಿರ್ಮಾಣಕ್ಕೆ ಮುಂದಾದಾಗ ನಾವು ಪ್ರತಿಭಟನೆ ನಡೆಸಿದ್ದೆವು. ಆಗ ಇಲ್ಲಿಂದ ಹೋಗಿದ್ದ ಟೋಲ್ ಮತ್ತೆ ಕಂಚಿನಡ್ಕ ಬಳಿ ತೆರೆಯಲು ಮುಂದಾಗಿದೆ ಎಂದವರು ಆರೋಪಿಸಿದರು.
ಮುಂದೆ ಬರಲಿರುವ ಟೋಲ್ ನಲ್ಲಿ ದ್ವಿಚಕ್ರ ವಾಹನಗಳಿಗೆ 30 ರೂ. ಮತ್ತು ಕಾರ್ ಗಳಿಗೆ 50 ರೂ, ಬಸ್‌ಗೆ 100 ರೂ. ಸುಂಕ ನಿಗದಿಯಾಗಿರುವ ವಿಚಾರ ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಜೀವಂಧರ ಅಧಿಕಾರಿ, ಜೊತೆ ಕಾರ್ಯದರ್ಶಿ ಸುದೇಶ್ ಮರೋಳಿ, ಕೋಶಾಧಿಕಾರಿ ಜ್ಯೋತಿ ಪ್ರಸಾದ್ ಹೆಗ್ಡೆ, ಸದಸ್ಯ ಜಯರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.