ಸ್ವಚ್ಛತೆ ನಿರಂತರ ಪ್ರಕ್ರಿಯೆಯಾಗಬೇಕಿದೆ: ಡಾ.ಸಿ.ಆನಂದ
ಮಂಗಳೂರು, ಆ.24: ಗ್ರಾಮ ಪಂಚಾಯತ್ ನ ಸ್ವಚ್ಛತಾ ಕಾರ್ಯಕ್ರಮ ಒಂದು ನಿರಂತ ಪ್ರಕ್ರಿಯೆ ಆಗಬೇಕು. ಈ ಬಗ್ಗೆ ವೈಯಕ್ತಿಕ ಜಾಗೃತಿ ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸಿ.ಆನಂದ ಹೇಳಿದ್ದಾರೆ.
ಮುಡಿಪುನಲ್ಲಿ ಜನಶಿಕ್ಷಣ ಟ್ರಸ್ಟ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛತೆ ಸುಸ್ಥಿರ ಅಭಿವೃದ್ಧಿ ಸಂವಾದ ಮತ್ತು ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಣೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಎಲ್ಲೆಂದರಲ್ಲಿ ಕಸ ಎಸೆಯುವವರ ಮನೋಭಾವದಲ್ಲಿ ಬದಲಾವಣೆ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಅಗತ್ಯ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡುವುದರಿಂದ ಅದರಿಂದ ನಮ್ಮ ಪರಿಸರಕ್ಕೆ, ಜೀವ ಪರಿಸರಕ್ಕೆ ಹಾನಿಯಾಗುತ್ತದೆ. ಆದ್ದರಿಂದ ನಮ್ಮ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವುದು ಪಂಚಾಯತ್ ನ ಎಲ್ಲ ನಿವಾಸಿಗಳ ನಿರಂತರ ಕೆಲಸವಾಗಬೇಕು. ಕೌಶಲ ತರಬೇತಿ ಪಡೆದ ಶಿಬಿರಾರ್ಥಿಗಳು ಅದನ್ನು ಬಳಸಬೇಕು ಮತ್ತು ಅದರಲ್ಲಿ ಹೆಚ್ಚು ಸಾಧನೆ ಮಾಡಿ ತಮ್ಮ ಜೀವನದಲ್ಲಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ನರೇಗ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಸಂವಾದ ಗೋಷ್ಠಿ ಯನ್ನು ನಡೆಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಸ್ಯ ಶಾಸ್ತ್ರದ ವಿಭಾಗದ ಮುಖ್ಯಸ್ಥ ಡಾ.ಪ್ರಶಾಂತ್ ನಾಯ್ಕ್, ನಿವೃತ್ತ ಯೋಧ ರಾಮಕೃಷ್ಣ ಶಾಸ್ತ್ರಿ, ಶ್ಯಾಮ್ ಭಟ್, ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್, ಉಪಾಧ್ಯಕ್ಷ ಅಬ್ದುಲ್ ಮಜೀದ್, ಕೂರ್ನಾಡು ಪಂಚಾಯತ್ ಅಧ್ಯಕ್ಷೆ ಲೋಲಾಕ್ಷಿ, ಇರಾ ಪಂಚಾಯತ್ ಅಧ್ಯಕ್ಷ ಉಮರ್, ರಮೇಶ್ ಶೇಣವ, ರಾಧಾಕೃಷ್ಣ ರೈ,ಅಬೂಬಕರ್ ಜಲ್ಲಿ, ಇಸ್ಮಾಯಿಲ್ ಕಣಂತೂರು, ಮಂದಾರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿದ್ಯಾ, ಪಂ. ಸದಸ್ಯೆ ಸಮೀಮ, ಸುಗ್ರಾಮ ಸಂಯೋಜಕ ಚೇತನ್ ಕುಮಾರ್, ಅರುಣಾ, ಜನನಿ, ಪ್ರಜ್ಞಾ ಸಂಯೋಜಕ, ಸೆಲ್ಕೊ ಸಂಸ್ಥೆಯ ಪ್ರತಿನಿಧಿ ಶರತ್, ಬಾಳೆಪುಣಿ ಗ್ರಾಮ ಪಂಚಾಯತ್ ಪಿಡಿಒ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.
16ಜನ ಕಂಪ್ಯೂಟರ್ ತರಬೇತಿ ಪಡೆದವರು, 8 ಜನ ಹೊಲಿಗೆ ತರಬೇತಿ ಪಡೆದವರು,4 ಜನ ಲಘು ವಾಹನ ಚಾಲನೆಯ ತರಬೇತಿ ಪಡೆದವರಿ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.