×
Ad

ಶಾಸಕರ ಅನುಚಿತ ವರ್ತನೆಗಳ ವಿರುದ್ಧ ಮುಖ್ಯಮಂತ್ರಿಗೆ ದೂರು: ಐವನ್ ಡಿಸೋಜ

Update: 2024-02-14 15:32 IST

ಮಂಗಳೂರು,ಫೆ.14; ನಗರದ ವೆಲೆನ್ಸಿಯಾದ ಶಾಲೆಯೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವೇದವ್ಯಾಸ ಕಾಮತ್ ಮತ್ತು ಶಾಸಕ ಭರತ್ ಶೆಟ್ಟಿ ಅವರು  ವಿಚಾರಣೆಮಾಡಲು ಅವಕಾಶ ಕಲ್ಪಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದರ ಬದಲು ಅನುಚಿತವಾಗಿ ವರ್ತಿಸಿ ದ್ದಾರೆ. ಶಾಸಕರಾಗಿ ಕರ್ತವ್ಯ ಲೋಪ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಶಾಸಕ ಹುದ್ದೆಯಿಂದ ವಜಾಗೊಳಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಹಾಗೂ ವಿಧಾನಸಭಾ ಸ್ಪೀಕರ್ ಅವರಿಗೆ ದೂರು ನೀಡಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ಬುಧವಾರ  ಮಲ್ಲಿಕಟ್ಟೆಯ ಕಾಂಗ್ರೆಸ್ ಭವದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಶಾಲೆಯಲ್ಲಿ ಶಿಕ್ಷಕಿಯಿಂದ ಏನಾದರೂ ತಪ್ಪಾಗಿದ್ದರೆ ಆ ಶಿಕ್ಷಕಿಯ ವಿರುದ್ಧ ಸೂಕ್ತ ಕ್ರಮಕ್ಕಾಗಿ ದೂರು ನೀಡಿ ಬಳಿಕ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಅವಕಾಶ ನೀಡದೆ ವಿದ್ಯಾರ್ಥಿಗಳನ್ನು ಸೇರಿಸಿ ಶಾಲೆಯ ಆವರಣದಲ್ಲಿ ಶಿಕ್ಷಕರನ್ನು ಅವಮಾನಗೊಳಿಸಿ ನಿಂದಿಸಿರುವುದು, ಕೋಮುದ್ವೇಷದ ಹೇಳಿಕೆ ನೀಡಿರುವುದು ಖಂಡನೀಯ. ಶಾಸಕರ ಈ ವರ್ತನೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು  ಆಗ್ರಹಿಸಿದರು.

 ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾದ ಶಾಸಕರು ತಮ್ಮ ಹೊಣೆಗಾರಿಕೆ ಮರೆತು ವರ್ತಿಸಿದ್ದಾರೆ. ಅವರು ಶಾಸಕರಾಗಿ ಮುಂದುವರಿಯುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಸುಮಾರು ಆರು ದಶಕಗಳ ಇತಿಹಾಸವಿರುವ ಸಂಸ್ಥೆಯ ಘನತೆಗೆ ಧಕ್ಕೆಯುಂಟುಮಾಡುವ  ಕೆಲಸ ಶಾಸಕರಿಂದ ನಡೆದಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪಿಸಿದರು.

ಮಂಗಳೂರಿನಲ್ಲಿ ಬಿಜೆಪಿಯ ಮೂಲಕ ಯೋಗೀಶ್ ಭಟ್, ಧನಂಜಯ ಕುಮಾರ್ ಜನಪ್ರತಿನಿಧಿಗಳಾಗಿದ್ದರು. ಆದರೆ ಅವರು ಈ ಇಬ್ಬರು ಶಾಸಕರ ರೀತಿ ವರ್ತಿಸಿಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ.ವಿ.ಮೋಹನ್ ಹೇಳಿದರು.

 ಶಿಕ್ಷಕಿಯ ಮಾತುಗಳ ಬಗ್ಗೆ ಆಕ್ಷೇಪವಿದ್ದರೆ ಪೋಷಕರು ಶಾಲೆಗೆ ಬಂದು ದೂರು ನೀಡಲು ಅವಕಾಶವಿತ್ತು. ಈ ಬಗ್ಗೆ ವಿಚಾರಣೆ ನಡೆದು ಕ್ರಮ ಜರುಗಿಸಲು ಅವಕಾಶ ಇರುವಾಗ  ಗೊಂದಲ ಸೃಷ್ಟಿಸಿ ಅದರ ಫೋಟೋ, ವೀಡಿಯೋ ಗಳನ್ನು ಸಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಎಂ.ಜಿ.ಹೆಗಡೆ ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಇಬ್ರಾಹಿಂ ಕೋಡಿಜಾಲ್, ಜೆ ಆರ್ ಲೋಬೊ, ಸದಾಶಿವ ಉಳ್ಳಾಲ್, ಎ ಸಿ ವಿನಾಯರಾಜ್, ನವೀನ್ ಡಿಸೋಜಾ, ಅಪ್ಪಿಲತಾ, ಜೆ. ಅಬ್ದುಲ್ ಸಲೀಮ್, ಗಣೇಶ್ ಪೂಜಾರಿ, ಯು.ಟಿ ಫರ್ಝಾನಾ, ವಿಕಾಸ್ ಶೆಟ್ಟಿ, ಇಮ್ರಾನ್ ಎ ಆರ್, ಶುಭೋದಯ ಆಳ್ವ, ಭಾಸ್ಕರ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News