ʼಫಾಳಿಲಾ-ಫಳೀಲಾ’ ಏಕೀಕೃತ ಪಠ್ಯಕ್ರಮದಡಿ ಮಹಿಳೆಯರಿಗೆ ಸಮನ್ವಯ ಶಿಕ್ಷಣ: ಸಈದ್ ಫೈಝಿ ಮಲಪ್ಪುರಂ
ಪುತ್ತೂರು, ಅ.22: ಮಹಿಳೆಯರು ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣವನ್ನು ಪಡೆಯುವುದು ಕಾಲದ ಬೇಡಿಕೆಯಾ ಗಿದೆ. ’ಸಮಸ್ತ’ದ ಅಧೀನದಲ್ಲಿ ಒಂದೇ ಪಠ್ಯಕ್ರಮದಡಿ ಮಹಿಳೆಯರಿಗೆ ಧಾರ್ಮಿಕ-ಲೌಕಿಕ ಶಿಕ್ಷಣವನ್ನು ಸಮನ್ವಹಿಸಿ ನೀಡು ತ್ತಿರುವುದು ಹೊಸ ಕ್ರಾಂತಿಯಾಗಿದೆ ಎಂದು ಫಾಳಿಲಾ ಕೇಂದ್ರೀಯ ಕೋರ್ಡಿನೇಟರ್ ಸಈದ್ ಫೈಝಿ ಮಲಪ್ಪುರಂ ಹೇಳಿದರು.
ಪುತ್ತೂರು ಮುರ ಎಂಪಿಎಂ ವಿದ್ಯಾಲಯದಲ್ಲಿ ನಡೆದ ‘ಸಮಸ್ತ’ದ ಅಧೀನದ ಕರ್ನಾಟಕ ಫಾಳಿಲಾ-ಫಳೀಲಾ ಮಹಿಳಾ ವುಮೆನ್ಸ್ ಕಾಲೇಜ್‌ಗಳ ಮ್ಯಾನೇಜ್ಮೆಂಟ್ ಮತ್ತು ಉಲಮಾ ಪ್ರತಿನಿಧಿ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರೀಯ ಬೋರ್ಡಿನ ಸಹ ಕೋರ್ಡಿನೇಟರ್ ಮುಬಶ್ಶರ್ ಫೈಝಿ ಮಲಪ್ಪುರಂ ಮಾತನಾಡಿ ಧರ್ಮದ ಚೌಕಟ್ಟಿನಡಿ ಮಹಿಳೆಯರಿಗೆ ಸಮನ್ವಯ ಶಿಕ್ಷಣ ನೀಡುವುದರ ಜೊತೆಗೆ ಅವರನ್ನು ಉತ್ತಮ ಪ್ರತಿಭಾವಂತರಾಗಿ ರೂಪಿಸುವ ಸಲುವಾಗಿ ವಿವಿಧ ಸಾಹಿತ್ಯ ಕಲಾ ಪ್ರತಿಭಾ ಕಾರ್ಯಕ್ರಮಗಳನ್ನು ಆಯೋಜಿಸಿಲಾಗಿದೆ. ಅದಕ್ಕಾಗಿ ವಿವಿಧ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಮುಫತ್ತಿಷ್ ಉಮರ್ ದಾರಿಮಿ ಸಾಲ್ಮರ ಅಧ್ಯಕ್ಷತೆ ವಹಿಸಿದ್ದರು. ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುರ‌್ರಶೀದ್ ಹಾಜಿ ಪರ್ಲಡ್ಕ, ಎಂಪಿಎಂ ವಿದ್ಯಾಲಯದ ಅಧ್ಯಕ್ಷ ನ್ಯಾಯವಾದಿ ಎಂ.ಪಿ. ಅಬೂಬಕ್ಕರ್, ಇಬ್ರಾಹಿಂ ಬಾತಿಷಾ ಅಝ್ಹರಿ ಉಪ್ಪಿನಂಗಡಿ, ಅಬೂ ರಾಝಿ ಬಾಖವಿ ಅಕ್ಕರಂಗಡಿ, ಅಬೂಬಕ್ಕರ್ ಸಿದ್ದೀಕ್ ಯಮಾನಿ ಮೆಲ್ಕಾರ್, ದಾವೂದ್ ಹನೀಫಿ ಮಿತ್ತಬೈಲು, ಜಿ.ಪಿ.ಇಸ್ಮಾಯಿಲ್ ದಾರಿಮಿ ಕೂರ್ನಡ್ಕ, ಶಾಫಿ ದಾರಿಮಿ ಕೂರ್ನಡ್ಕ, ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಅಬ್ದುರ‌್ರಹ್ಮಾನ್ ಫೈಝಿ ಕೆಮ್ಮಾರ, ಯು. ಮುಹಮ್ಮದ್ ಹಾಜಿ ಪಡೀಲ್, ಹಾಜಿ ಅಬ್ದುರ‌್ರಹಿಮಾನ್ ಅಝಾದ್ ದರ್ಬೆ, ಮುಹಮ್ಮದ್ ಶರೀಫ್ ಬೋರುಗುಡ್ಡೆ, ಅಹ್ಮದ್ ಕಬೀರ್ ಕುಂಡಾಲ, ಅಬ್ದುಲ್ ಖಾದರ್ ಬೋರುಗುಡ್ಡೆ, ಕೆ.ಎಂ. ಅಬ್ದುಲ್ ಖಾದರ್ ಕೂರ್ನಡ್ಕ, ಆದಂ ಮುಕ್ರಂಪಾಡಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ಕರ್ನಾಟಕದ ಫಾಳಿಲಾ ಕಾಲೇಜ್‌ಗಳ ವಿದ್ಯಾರ್ಥಿನಿಯರ ಸ್ಟೂಡೆಂಟ್ಸ್ ಯೂನಿಯನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಕೇಂದ್ರೀಯ ಬೋರ್ಡಿನ ನಿರ್ದೇಶನದಂತೆ ಉಪನ್ಯಾಸಕಿಯರ ನೇತೃತ್ವದಲ್ಲಿ ನಡೆಯಿತು.
ಕರ್ನಾಟಕದ ಫಾದಿಲಾ ಸಂಯೋಜಕ ಮುಸ್ತಫಾ ಅನ್ಸಾರಿ ಅಡ್ಯಾರ್ ಕಣ್ಣೂರು ಸ್ವಾಗತಿಸಿದರು. ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ವಿವಿಧ ಕಾರ್ಯಕ್ರಮ ನಿರೂಪಿಸಿದರು.