×
Ad

ತೃಪ್ತಿ ಮತ್ತು ಮಾನವೀಯತೆಯನ್ನು ಬೆಳೆಸಿಕೊಳ್ಳಿ: ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ

Update: 2023-08-28 17:23 IST

ಮೂಡುಬಿದಿರೆ: ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವಂತಹ ಸಮಾಜದಲ್ಲಿ ನಾವಿದ್ದೇವೆ. ಆದ್ದರಿಂದ ನಾನು ಶ್ರೀಮಂತನಾಗಬೇಕೆಂಬ ಪೈಪೋಟಿ ಶುರುವಾಗುವ ಮೂಲಕ ಮಾನವೀಯತೆಯನ್ನು ಮರೆತಿದ್ದೇವೆ. ನಮ್ಮಲ್ಲಿ ತೃಪ್ತಿ ಎಂಬ ಗುಣ ಇಲ್ಲದೆ ದುರಾಸೆ ಎಂಬ ರೋಗ ಬಂದರೆ ಅದು ದೇಶಕ್ಕೆ ನಷ್ಟ ಮಾತ್ರವಲ್ಲದೆ ವ್ಯಕ್ತಿಯ ಮೇಲೂ ಪರಿಣಾಮ ಬೀರುತ್ತದೆ ಎಂದ ಅವರು ಹ್ಯುಮಾನಿಟಿ ಸಂಸ್ಥೆಯು ಸುಂದರ ಮತ್ತು ಅರ್ಥಪೂರ್ಣವಾದ ಕೆಲಸವನ್ನು ಕೈಗೆತ್ತಿಕೊಂಡಿರುವುದು ಶ್ಲಾಘನೀಯ ಎಂದು ರಾಜ್ಯದ ಮಾಜಿ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಹೇಳಿದರು.

ಅವರು 'ಹ್ಯುಮಾನಿಟಿ ಟ್ರಸ್ಟ್' (ರಿ) ಬೆಳ್ಮಣ್ ಇದರ 1000ನೇ ಪ್ರಾಜೆಕ್ಟ್ 'ಉಚಿತ ವಸತಿ ಯೋಜನೆ"ಯ 20 ಬಾಡಿಗೆ ರಹಿತ ಮನೆಗಳನ್ನು ಪಡುಮಾರ್ನಾಡಿನಲ್ಲಿ ಉದ್ಘಾಟಿಸಿ, ಬನ್ನಡ್ಕ ಪಾಂಚಜನ್ಯ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ಸಮಾಜದಲ್ಲಿ ತಪ್ಪು ಮಾಡಿ ಜೈಲಿಗೆ ಹೋದವನನ್ನು ಮತ್ತು ಆತನ ಮನೆಯವರಿಗೂ ಸಾಮಾಜಿಕವಾಗಿ ಶಿಕ್ಷೆಯಾಗುತ್ತಿತ್ತು ಆದರೆ ಇಂದು ಮಾನ ಮರ್ಯಾದೆಯೆ ಇಲ್ಲದಂತ್ತಾಗಿದೆ ಎಂದು ಖೇಧವ್ಯಕ್ತಪಡಿಸಿದರು.

ವಿಜಯ ಟೈಮ್ಸ್'ನ ವ್ಯವಸ್ಥಾಪಕ ನಿರ್ದೇಶಕಿ ವಿಜಯಲಕ್ಷ್ಮೀ ಶಿಬರೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಾವು ಹೃದಯ ವೈಶಾಲ್ಯತೆಯನ್ನು ಹೊಂದಬೇಕು. ಪ್ರೀತಿಸುವ, ದಾನ ಮಾಡುವ, ಆದರಿಸುವ, ಗೌರವಿಸುವ, ಪ್ರೋತ್ಸಾಹಿಸುವ ಹಾಗೂ ಮಾನವೀಯತೆಯ ಗುಣ ನಮ್ಮಲ್ಲಿರಬೇಕು ಎಂದರು.

''ದೈಜಿವಲ್ಡ್೯ ಮೀಡಿಯಾ'ದ ಸಂಸ್ಥಾಪಕ ವಾಲ್ಟರ್ ನಂದಳಿಕೆ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಸನ್ಮಾನ : ಉಚಿತ ಮನೆಗಳನ್ನು‌ ನಿರ್ಮಿಸಲು ದೇಣಿಗೆ ನೀಡಿರುವ ದಾನಿಗಳನ್ನು ಸನ್ಮಾನಿಸಲಾಯಿತು. ಹ್ಯುಮಾನಿಟಿ ಟ್ರಸ್ಟ್ ನ ಅಧ್ಯಕ್ಷ ರೋಶನ್ ಬೆಳ್ಮಣ್ ಅವರು ಮಾತನಾಡಿ ಮಾನವೀಯತೆಯೇ ಧರ್ಮ. ಅದಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬ ನೆಲೆಗಟ್ಟಿನಲ್ಲಿ ಹ್ಯುಮಾನಿಟಿಯ ಹುಟ್ಟಿಕೊಂಡಿದೆ. ಯಾರೆಲ್ಲಾ ದಾನ ಕೊಟ್ಟಿದ್ದಾರೋ ಅವರೆಲ್ಲ ತಮ್ಮ ಸ್ವ ಇಚ್ಛೆಯಿಂದ ನೀಡಿದ್ದಾರೆ. ಜಾತಿ, ಮತ, ಧರ್ಮವೆಂದು ನೋಡದೆ ಬಡವರಿಗೆ ಸಹಾಯ ಮಾಡಿದ್ದೇವೆ ಎಂದರು.

ಸಂಸ್ಥೆಯ ಟ್ರಸ್ಟಿ ಗಳಾದ ಪ್ರಶಾಂತ್ ಫ್ಯ್ರಾಂಕ್ ಸ್ವಾಗತಿಸಿ ಸಂಸ್ಥೆಯ ಕಿರುನೋಟವನ್ನು ನೀಡಿದರು. ಟ್ರಸ್ಟಿಗಳಾದ ನವೀನ್ ಶೆಣೈ , ರೂಪಾ ಬಲ್ಲಾಳ್ ಅತಿಥಿಗಳನ್ನು ಪರಿಚಯಿಸಿದರು. ನೆಲ್ಸನ್ ಮೋನೀಶ್ ಕಾರ್ಯಕ್ರಮ ನಿರೂಪಿಸಿದರು. ಪೃಥ್ವಿ ಸಾಲ್ಯಾನ್ ದಾನಿಗಳ ವಿವರ ನೀಡಿದರು. ಲೋಯ್ಡ್ ರೇಗೋ ವಂದಿಸಿದರು. ದ.ಕ ಮತ್ತು ಉಡುಪಿ ಜಿಲ್ಲೆಯ ಇಬ್ಬರು ಬಡವರಿಗೆ ಉಚಿತವಾಗಿ ಬೋರ್ ವೆಲ್ ಕೊರೆದು ನೀಡುವುದಾಗಿ ಸಪ್ನಾ ಬೊರ್ ವೆಲ್ ನವರು ಹೇಳಿರುವುದಾಗಿ ರೋಶನ್ ಬೆಳ್ಮಣ್ ಪ್ರಕಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News