ಡಿಐಜಿ ಅಮಿತ್ ಸಿಂಗ್ ವರ್ಗಾವಣೆ: ಡಾ.ಎಂ.ಬಿ. ಬೋರಲಿಂಗಯ್ಯ ಪಶ್ಚಿಮ ವಲಯದ ನೂತನ ಡಿಐಜಿ
ಅಮಿತ್ ಸಿಂಗ್
ಮಂಗಳೂರು: ಪಶ್ಚಿಮ ವಲಯ ಡಿಐಜಿ ಅಮಿತ್ ಸಿಂಗ್ ಅವರಿಗೆ ಮೈಸೂರಿಗೆ (ದಕ್ಷಿಣ ವಲಯ) ವರ್ಗಾವಣೆಯಾಗಿದ್ದು, ತೆರವಾದ ಸ್ಥಾನಕ್ಕೆ ಈ ವರೆಗೆ ದಕ್ಷಿಣ ವಲಯ ಡಿಐಜಿಯಾಗಿದ್ದ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಪಶ್ಚಿಮ ವಲಯ ನೂತನ ಡಿಐಜಿಯಾಗಿ ಆಗಮಿಸಲಿದ್ದಾರೆ.
ರಾಜ್ಯ ಸರಕಾರ ಗುರುವಾರ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಟ್ರಾಫಿಕ್ ದಕ್ಷಿಣ ವಲಯದ ಡಿಸಿಪಿ ಶಿವ ಪ್ರಕಾಶ್ ದೇವರಾಜ್ ಅವರನ್ನು ಕಲಬುರುಗಿಯ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ತೆರವಾಗಿರುವ ಸ್ಥಾನಕ್ಕೆ ಕಲಬುರುಗಿಯ ಎಸ್ಪಿಯಾಗಿದ್ದ ಅಡ್ಡೂರು ಶ್ರೀನಿವಾಸಲು ಅವರನ್ನು ವರ್ಗಾವಣೆ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಲ್ಲನಾಯಕನಹಳ್ಳಿಯ ಡಾ.ಎಂ.ಬಿ. ಬೋರಲಿಂಗಯ್ಯ 2008ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದು, ಐಪಿಎಸ್‌ಗೆ ಆಯ್ಕೆಯಾದ ಬಳಿಕ ಕಲಬುರಗಿಯ ಪೊಲೀಸ್ ತರಬೇತಿ ಶಾಲೆಯಲ್ಲಿ ಫೌಂಡೇಶನ್ ತರಬೇತಿ ಪಡೆದು ತಿಪಟೂರಿನಲ್ಲಿ ಸಹಾಯಕ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ದಾವಣಗೆರೆ, ಉಡುಪಿಯಲ್ಲಿ ಎಸ್ಪಿಯಾಗಿ, ಬೆಂಗಳೂರಿನಲ್ಲಿ ಡಿಸಿಪಿಯಾಗಿ ರಾಜ್ಯ ಗುಪ್ತಚರ ಮತ್ತು ರೈಲ್ವೆ ಪೊಲೀಸ್ ಎಸ್ಪಿಯಾಗಿ ಸೇವೆ ಸಲ್ಲಿಸಿದರು.
ಡಿಐಜಿಪಿಯಾಗಿ ಬಡ್ತಿ ಪಡೆದ ನಂತರ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಆಗಿ, ಮೈಸೂರು ದಕ್ಷಿಣ ವಲಯದ ಡಿಐಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.