×
Ad

ಬಾಕಿ ಉಳಿಸಿದ ಕನಿಷ್ಠ ಕೂಲಿ ಪಾವತಿಗೆ ಆಗ್ರಹ: ಕೈಕಂಬದಲ್ಲಿ ಬೀಡಿ ಡಿಪೋಗೆ ಮುತ್ತಿಗೆ

Update: 2025-10-09 15:41 IST

ಮಂಗಳೂರು, ಅ.9: ಬೀಡಿ ಕಾರ್ಮಿಕರಿಗೆ 2018 ರಿಂದ 2024ರ ವರಗಿನ ಬಾಕಿ ಉಳಿಸಿರುವ ಕನಿಷ್ಠ ವೇತನ, 2024ರಲ್ಲಿ ಹೆಚ್ಚಳಗೊಂಡಿರುವ ತುಟ್ಟಿಭತ್ತೆ ಪಾವತಿಗೆ ಒತ್ತಾಯಿಸಿ ದ.ಕ. ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ಕುಪ್ಪೆಪದವು ಪ್ರದೇಶ ಬೀಡಿ ಕೆಲಸಗಾರರ ಸಂಘ, ಗುರುಪುರ, ಸುರತ್ಕಲ್ ಬೀಡಿ ಲೇಬರ್ ಯೂನಿಯನ್, ವಾಮಂಜೂರು ಪ್ರದೇಶ ಬೀಡಿ ಕೆಲಸಗಾರರ ಸಂಘ ಜಂಟಿಯಾಗಿ ಕೈಕಂಬದಲ್ಲಿರುವ ಟೆಲಿಫೋನ್ ಬೀಡಿ ಡಿಪೋಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು.

 

ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಮುತ್ತಿಗೆ ಪ್ರತಿಭಟನೆ ಸುಮಾರು ಮೂರು ತಾಸು ಮುಂದುವರಿಯಿತು. ಐನೂರಕ್ಕೂ ಹೆಚ್ಚು ಮಹಿಳಾ ಬೀಡಿ ಕಾರ್ಮಿಕರು ಉರಿ ಬಿಸಿಲನ್ನೂ ಲೆಕ್ಕಿಸದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

2018ರಲ್ಲಿ ತ್ರಿಪಕ್ಷೀಯ ಮಾತುಕತೆಯ ಆಧಾರದಲ್ಲಿ ಸರಕಾರ 40 ರೂ. ಹೆಚ್ಚಿಸಿ ಕನಿಷ್ಠ ಕೂಲಿ ನಿಗದಿಗೊಳಿಸಿ ಆದೇಶ ಹೊರಡಿಸಿತ್ತು. ಮಾಲಕರು ಈ ಆದೇಶವನ್ನು ಜಾರಿಗೊಳಿಸದೆ ಕಾರ್ಮಿಕರನ್ನು ವಂಚಿಸುತ್ತಾ ಬಂದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

 

2024 ರಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಲಕರ ಪರವಾಗಿ ಹಿಮ್ಮುಖವಾಗಿ ಕನಿಷ್ಠ ಕೂಲಿ ಕಡಿತಗೊಳಿಸಿ ಏಕಪಕ್ಷೀಯಾಗಿ ಆದೇಶ ಹೊರಡಿಸಿದ್ದರು. ಮಾಲಕರ ಪರವಾಗಿ ಹಿಮ್ಮುಖವಾಗಿ ಹೊರಡಿಸಲಾದ ಆದೇಶವನ್ನೂ ಜಾರಿಗೊಳಿಸದೆ ಬೀಡಿ ಮಾಲಕರು ಕಾರ್ಮಿಕರ ಬಾಕಿ ವೇತನ ಪಾವತಿಸದಿರುವ ಕಾರಣದಿಂದಾಗಿ ಈಗ ಬೀಡಿ ಮಜೂರರ ಸಂಘಗಳು ಹೋರಾಟವನ್ನು ತೀವ್ರಗೊಳಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

 

ಗುರುವಾರ ಕೈಕಂಬ, ಗುರುಪುರ, ವಾಮಂಜೂರು, ಕುಪ್ಪೆಪದವು ಪ್ರದೇಶದ ಬೀಡಿ ಕಾರ್ಮಿಕರ ಸಂಘಗಳು ಪ್ರತಿಭಟನೆ ನಡೆಸಿದವು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ವಸಂತ ಆಚಾರಿ, ಬಿ ಶೇಖರ್, ಮುನೀರ್ ಕಾಟಿಪಳ್ಳ, ಬಾಲಕೃಷ್ಣ ಶೆಟ್ಟಿ, ಸದಾಶಿವ ದಾಸ್, ಸೀತಾರಾಮ ಬೇರಿಂಜೆ ಮಾತನಾಡಿದರು.

 

ಪ್ರತಿಭಟನೆಯ ನೇತೃತ್ವವನ್ನು ಸ್ಥಳೀಯ ಬೀಡಿ ಮಜೂರರ ಸಂಘದ ಪದಾಧಿಕಾರಿಗಳಾದ ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಯಶೋಧ ಮಳಲಿ, ಭವಾನಿ ವಾಮಂಜೂರು, ಹೊನ್ನಯ್ಯ ಅಮೀನ್ ವಾಮಂಜೂರು, ಕುಸುಮ ಕುಪ್ಪೆಪದವು, ವಾರಿಜ ಕುಪ್ಪೆಪದವು, ಅಶೋಕ ವಾಮಂಜೂರು ಮತ್ತಿತರರು ವಹಿಸಿದ್ದರು.

ನೋಣಯ್ಯ ಗೌಡ ಸ್ವಾಗತಿಸಿ, ವಸಂತಿ ಕುಪ್ಪೆಪದವು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News