ಧರ್ಮಸ್ಥಳ ಪ್ರಕರಣ| ಎಸ್.ಐ.ಟಿ ನೀಡಿರುವ ಮಧ್ಯಂತರ ವರದಿಯನ್ನು ತಟಸ್ಥವಾಗಿರಿಸಿದ ನ್ಯಾಯಾಲಯ
ಫೈಲ್ ಫೋಟೊ
ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಕೋರಿಕೆಯನ್ನು ಮನ್ನಿಸಲು ನಿರಾಕರಿಸಿದ ನ್ಯಾಯಾಲಯ ಈಗ ಎಸ್.ಐ.ಟಿ ನೀಡಿರುವ ಮಧ್ಯಂತರ ವರದಿಯನ್ನು ತಟಸ್ಥವಾಗಿರಿಸಿದ್ದು, ಪೂರ್ಣ ವರದಿಯನ್ನು ಎಸ್.ಐ.ಟಿ ಸಲ್ಲಿಸಿದ ಬಳಿಕ ಪ್ರಕರಣವನ್ನು ಕೈಗೆತ್ತಿಗೊಳ್ಳುವುದಾಗಿ ತಿಳಿಸಿದೆ.
ಉಳಿದ ವಿಚಾರಗಳ ಬಗ್ಗೆ ಜ.23ರಕ್ಕೆ ವಿಚಾರಣೆಯನ್ನು ಮುಂದೂಡಿ ಶನಿವಾರ ಆದೇಶ ಹೊರಡಿಸಿದೆ.
ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ ಎಸ್.ಐ.ಟಿ ಮಹೇಶ್ ಶೆಟ್ಟಿ ಸೇರಿದಂತೆ ಆರು ಮಂದಿಯ ವಿರುದ್ಧ ಕ್ರಮಕೈಗೊಳ್ಳಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಅವರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಲು ನ್ಯಾಯಾಲಯ ನಿರಾಕರಿಸಿದ್ದು ಸಲ್ಲಿಸಿದ ಅಪೂರ್ಣ ವರದಿಯನ್ನು ಸ್ಥಗಿತ ಗೊಳಿಸಿ ಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದೆ.
ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಟಿ.ಎಚ್ ಅವರ ಮುಂದೆ ಇಂದು ಮಹೇಶ್ ಶೆಟ್ಟಿ ಹಾಗು ಇತರ ಸೌಜನ್ಯ ಪರ ಹೋರಾಟಗಾರರ ಪರವಾಗಿ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆ ರಾಜು, ವಿಜಯ ವಾಸು ಪೂಜಾರಿ, ಸಿರಾಜುದ್ದೀನ್ ಜೋಗಿಬೆಟ್ಟು ಹಾಗೂ ತಂಡ ವಾದ ಮಂಡಿಸಿದರು.
ವಾದವಿವಾದಗಳನ್ನು ಆಲಿಸಿದ ನ್ಯಾಯಾಲಯ ಎಸ್.ಐ.ಟಿ ಸಲ್ಲಿಸಿರುವ ವರದಿ ಅಪೂರ್ಣವಾಗಿದೆ ಎಂಬ ವಾದವನ್ನು ಒಪ್ಪಿಕೊಂಡು ಇದರ ಆಧಾರದ ಮೇಲೆ ಯಾರ ಮೇಲೆಯೂ ಕ್ರಮ ಕೈಗೊಳ್ಳಲು ಆದೇಶ ನೀಡಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ಈ ಅಪೂರ್ಣ ವರದಿಯನ್ನು ತಟಸ್ಥ ಮಾಡಿ ಆದೇಶ ಹೊರಡಿಸಿದೆ.
ಎಸ್.ಐ.ಟಿ ತನಿಖೆ ನಡೆಸಿ ಪೂರ್ಣ ವರದಿಯನ್ನು ಸಲ್ಲಿಸಿದ ಬಳಿಕ ಈ ವಿಚಾರವನ್ನು ಪರಿಗಣಿಸುವುದಾಗಿ ತಿಳಿಸಿದೆ. ಎಸ್.ಐ.ಟಿ ಗೆ ವರದಿ ನೀಡಲು ಸಮಯ ಮಿತಿ ನಿಗಧಿ ಪಡಿಸಬೇಕಾದುದು ನ್ಯಾಯಾಲಯವಲ್ಲ ಎಂದು ನ್ಯಾಯಾಧೀಶರು ತನಿಖೆ ಮುಂದುವರಿಸುವಂತೆ ಎಸ್.ಐ.ಟಿ ಅಧಿಕಾರಿಗಳಿಗೆ ಸೂಚಿಸಿತ್ತು.
ನ್ಯಾಯಾಲಯದಲ್ಲಿ ಹಲವು ಬಾರಿ ಎರಡೂ ಕಡೆಯಿಂದ ಹಾಜರಾಗಿದ್ದ ನ್ಯಾಯವಾದಿಗಳ ನಡುವೆ ವಾಗ್ವಾವಾದಗಳು ನಡೆಯಿತು. ಧರ್ಮಸ್ಥಳ ಪರವಾಗಿ ಹಿರಿಯ ನ್ಯಾಯವಾದಿಗಳಾದ ರಾಜಶೇಖರ ಹಿಲಿಯಾರ್ ಹಾಗೂ ಇತರರು ಹಾಜರಾಗಿದ್ದರು. ಎಸ್.ಐ.ಟಿ ಪರವಾಗಿ ಎ.ಪಿ.ಪಿ ವಾದ ಮಂಡಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಪರ ಅರ್ಜಿ ವಿಚಾರಣೆ ಜ.23ಕ್ಕೆ ಮುಂದೂಡಿಕೆ:-
ಧರ್ಮಸ್ಥಳ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಸಂತ್ರಸ್ತರು ಎಂಬ ನೆಲೆಯಲ್ಲಿ ಪ್ರಕರಣದ ವಿಚಾರಣೆಯಲ್ಲಿ ತಮ್ಮ ವಾದವನ್ನು ಮಂಡಿಸಲು ತಮಗೂ ಅವಕಾಶ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ವಾದ ಆಲಿಸಿ ಮುಂದಿನ ವಿಚಾರಣೆಯನ್ನು ಜ 23ಕ್ಕೆ ಮುಂದೂಡಿದೆ.
ಧರ್ಮಸ್ಥಳ ಪರವಾಗಿ ಸಲ್ಲಕೆಯಾಗಿರುವ ಅರ್ಜಿಗೆ ಹಿರಿಯ ನ್ಯಾಯವಾದಿ ದೊರೆ ರಾಜು ಅವರು ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆಯೂ ಜ.23 ರಂದು ನಡೆಯಲಿದೆ. ಅದೇ ರೀತಿ ಈ ಅರ್ಜಿಯ ಬಗ್ಗೆ ಎಸ್.ಐ.ಟಿ ಪರವಾಗಿ ವಾದ ಮಂಡಿಸಿದ ಸರಕಾರಿ ವಕೀಲರು ಅರ್ಜಿಯನ್ನು ಪರಿಶೀಲಿಸಿ ತಕರಾರು ಇದೆಯೇ ಎಂಬ ಬಗ್ಗೆ ಮುಂದಿನ ವಿಚಾರಣೆಯ ವೇಳೆ ತಿಳಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.