ಧರ್ಮಸ್ಥಳ ಪ್ರಕರಣ | ದೂರುದಾರ ಗುರುತಿಸಿದ 11ನೇ ಸ್ಥಳದಲ್ಲಿ ಅಗೆಯುವಿಕೆ ಆರಂಭ
ಏಳನೇ ದಿನಕ್ಕೆ ಕಾಲಿಟ್ಟ ಎಸ್ಐಟಿಯ ಶೋಧ ಕಾರ್ಯಾಚರಣೆ
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಅವಶೇಷ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ಮಂಗಳವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.
ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಸಾಕ್ಷಿ ದೂರುದಾರ ಈ ಹಿಂದೆ ಗುರುತಿಸಿದ್ದ 11ನೇ ಸ್ಥಳದಲ್ಲಿ ಎಸ್ಐಟಿ ಶೋಧ ಕಾರ್ಯ ಆರಂಭಿಸಿದೆ.
ಸೋಮವಾರದ ಕಾರ್ಯಾಚರಣೆಯ ವೇಳೆ ದೂರುದಾರನು ಈ ಹಿಂದೆ ತೋರಿಸಿದ್ದ 11ನೇ ಜಾಗಕ್ಕಿಂತ ಮುಂದಕ್ಕೆ ಕಾಡಿನೊಳಗೆ ಎಸ್ಐಟಿ ಅಧಿಕಾರಿಗಳನ್ನು ಕರೆದೊಯ್ದಿದ್ದು, ಅಲ್ಲಿ ನೆಲದ ಮೇಲೆಯೇ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಅವುಗಳನ್ನು ತಜ್ಞರ ತಂಡ ವೈಜ್ಞಾನಿಕವಾಗಿ ಸಂಗ್ರಹ ಮಾಡಿದೆ.
ಸಾಕ್ಷಿ ದೂರುದಾರು ಈ ಹಿಂದೆ ಗುರುತಿಸಿದ್ದ 11ನೇ ಸ್ಥಳದಲ್ಲಿ ಇಂದು ಅಗೆಯುವ ಕಾರ್ಯ ಆರಂಭಿಸಲಾಗಿದೆ. ಇನ್ನೂ ಹಲವಡೆ ಮೃತದೇಹ ಹೂತಿರುವುದಾಗಿ ದೂರುದಾರ ಹೇಳಿರುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಎಸ್ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಸ್ಪಿ ದರ್ಜೆಯ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಸಹಿತ ಎಸ್ಐಟಿ ಅಧಿಕಾರಿಗಳ ಜೊತೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರಿನ ಕೆಎಂಸಿ ವೈದ್ಯರ ತಂಡ, ಎಫ್.ಎಸ್.ಎಲ್. ತಂಡ, ಐ.ಎಸ್.ಡಿ. ಹಾಗೂ ಇತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಬದಿಯಲ್ಲಿ ಸಾಕ್ಷಿ ದೂರುದಾರ ಒಟ್ಟು 13 ಜಾಗಗಳನ್ನು ತೋರಿಸಿ, ‘ಅಲ್ಲಿ ಮೃತದೇಹಗಳನ್ನು ಹೂತಿದ್ದೆ’ ಎಂದು ಎಸ್ಐಟಿಗೆ ತಿಳಿಸಿದ್ದ. ಅದರಂತೆ ಆತ ತೋರಿಸಿದ್ದ ಜಾಗಗಳಲ್ಲಿ ಜು.29ರಿಂದ ಅಗೆಯುವ ಕಾರ್ಯವನ್ನು ಎಸ್ಐಟಿ ಆರಂಭಿಸಿದೆ. ಮೂರನೇ ದಿನದ ಅಗೆಯುವಿಕೆಯ ವೇಳೆ ಆರನೇ ಜಾಗದಲ್ಲಿ ಅಸ್ಥಿಪಂಜರದ ಅವಶೇಷಗಳು ಲಭಿಸಿವೆ. ಉಳಿದ ಏಳು ಕಡೆಗಳಲ್ಲಿ ಮೃತದೇಹದ ಯಾವುದೇ ಅವಶೇಷಗಳೂ ಸಿಕ್ಕಿಲ್ಲ. ಈ ಮಧ್ಯೆ ಸೋಮವಾರ ಗುರುತಿಸಿದ ಜಾಗಕ್ಕಿಂತ ಸುಮಾರು 100 ಮೀಟರ್ ದೂರದಲ್ಲಿ ಕಾಡಿನೊಳಗೆ ನೆಲದ ಮೇಲೆಯೇ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ.