×
Ad

ಧರ್ಮಸ್ಥಳ | ಶ್ರೀಧರ ಕೊಲೆ ಪ್ರಕರಣ: ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

Update: 2026-02-26 08:34 IST

ಬೆಳ್ತಂಗಡಿ: ಶಿಬಾಜೆ ಗ್ರಾಮದ ಕುರುಂಜ ಎಂಬಲ್ಲಿ ಮೂರು ವರ್ಷಗಳ ಹಿಂದೆ ನಡೆದ ಶ್ರೀಧರ ಎಂಬ ದಲಿತ ಯುವಕನ ಕೊಲೆ ಪ್ರಕರಣದ ಹಿಂದಿನ ತನಿಖೆಯಲ್ಲಿ ಅನೇಕ ಲೋಪಗಳಾಗಿದ್ದು, ಪ್ರಭಾವಿಗಳ ಒತ್ತಡದಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ. ಈಗ ಸರ್ಕಾರ ರಚಿಸಿರುವ ಎಸ್‌ಐಟಿ ಉನ್ನತ ಮಟ್ಟದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ವಿಭಾಗದ ಸಂಘಟನಾ ಸಂಚಾಲಕ ವಸಂತ ಬಿ.ಕೆ ಒತ್ತಾಯಿಸಿದರು.

ಅವರು ಫೆ.25ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಶಾಖೆ ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಮೂಡಿಗೆರೆ ದಿನ್ನಕೆರೆ ನಿವಾಸಿಯಾದ ಶ್ರೀಧರ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್‌ನಲ್ಲಿ ತೋಟದ ಕಾರ್ಮಿಕನಾಗಿದ್ದ.

2022 ಡಿಸೆಂಬರ್ 17ರಂದು ಸಂಜೆ ವೇಳೆ ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಮಹೇಶ್ ಪೂಜಾರಿ ಹಾಗೂ ಆನಂದ ಗೌಡ ಸೇರಿ ಶ್ರೀಧರನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಹರೀಶ್, ಟಿ.ಸಿ. ಅಬ್ರಹಾಂ ಹಾಗೂ ಪರಮೇಶ್ವರ ಗೌಡ ಈ ಘಟನೆ ನೋಡಿ ರಕ್ಷಣೆ ಮಾಡಿದ್ದರು.

ಅದೇ ದಿನ ರಾತ್ರಿ ತೋಟದ ತಂತಿ ಬೇಲಿಯನ್ನು ಸರಿಸಿ ಒಳಗೆ ಪ್ರವೇಶಿಸಿ, ಶ್ರೀಧರನ ಮನೆಗೆ ನುಗ್ಗಿ ಪುನಃ ಅವನ ಹೊಟ್ಟೆ ಹಾಗೂ ತಲೆಗೆ ಬಲವಾಗಿ ಹೊಡೆದು, ವಿಷವನ್ನು ಬಲವಂತವಾಗಿ ಕುಡಿಸಿ, ವಿವಸ್ತ್ರಗೊಳಿಸಿ ಕೊಲೆ ಮಾಡಲಾಗಿದೆ ಎಂಬ ದೂರಿನಂತೆ ಪ್ರಕರಣ ದಾಖಲಾಗಿದ್ದರೂ ಪಾರದರ್ಶಕ ತನಿಖೆ ನಡೆದಿಲ್ಲ ಎಂದು ಅವರು ಆರೋಪಿಸಿದರು.

ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದರೂ ಸಮರ್ಪಕ ತನಿಖೆ ನಡೆದಿಲ್ಲ. ರಾಜಕೀಯ ಲೇಪನವೂ ನಡೆದಿದೆ. ಆರೋಪಿಗಳ ರಕ್ಷಣೆಗೆ ಕಾಣದ ಕೈಗಳು ಪ್ರಯತ್ನ ನಡೆಸಿವೆ. ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಾ, ಸಾಕ್ಷಿ ನುಡಿಯದಂತೆ ಸಾಕ್ಷಿದಾರರಿಗೆ ಬೆದರಿಕೆ ಒಡ್ಡಿದ ಘಟನೆಗಳು ನಡೆದಿವೆ. ಡಿಎಸ್‌ಎಸ್‌ ಪ್ರತಿಭಟನೆ ನಂತರ ಆರೋಪಿಗಳನ್ನು ಬಂಧಿಸಿದರೂ ನಂತರ ಜಾಮೀನು ದೊರೆತಿದೆ. ಈ ಕುರಿತು ಎಸ್‌ಐಟಿ ನಿಷ್ಪಕ್ಷಪಾತ ತನಿಖೆ ನಡೆಸಿ ಮನೆಯವರಿಗೆ ನ್ಯಾಯ ಒದಗಿಸಬೇಕು ಎಂದು ಬಿ.ಕೆ. ವಸಂತ್ ಆಗ್ರಹಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಮಾತನಾಡಿ, ಶ್ರೀಧರ ಕೊಲೆ ಪ್ರಕರಣದಲ್ಲಿ ಆಗಿನ ಬಂಟ್ವಾಳ ಡಿವೈಎಸ್‌ಪಿ ತನಿಖಾಧಿಕಾರಿ ಪ್ರಕಾಶ್ ರಾಥೋಡ್ ಅವರಿಂದ ಲೋಪವಾಗಿದೆ ಎಂದು ಆರೋಪಿಸಿದರು. ಅವರ ಕಚೇರಿಗೆ ವಿಚಾರಣೆಗೆ ಬಂದ ಆರೋಪಿಗಳು ಹಿಂದಿರುಗುವ ವೇಳೆ ಕೊಕ್ಕಡದ ಬಾರೊಂದರಲ್ಲಿ ರತೀಶ್ ಗೌಡ ಅವರ ನೇತೃತ್ವದಲ್ಲಿ ಡಿನ್ನರ್ ಪಾರ್ಟಿ ನಡೆಸಿ ಸೆಲ್ಫಿ ತೆಗೆದು ಸ್ಟೇಟಸ್‌ನಲ್ಲಿ ಹಾಕಿರುವ ಘಟನೆ ನಡೆದಿದೆ. ಆರೋಪಿಗಳು ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದರೂ ರಾಜಾರೋಷವಾಗಿ ತಿರುಗಾಡುತ್ತಿರುವುದು ತನಿಖೆಯ ಲೋಪವನ್ನು ತೋರಿಸುತ್ತದೆ ಎಂದು ಹೇಳಿದರು.

ನಂತರ ಬಂದ ಡಿವೈಎಸ್‌ಪಿ ಗಾನಕುಮಾರ್ ಅವರಿಂದಲೂ ಸಮರ್ಪಕ ತನಿಖೆ ನಡೆದಿಲ್ಲ. ದೂರು ನೀಡಿದವರನ್ನೇ ಆರೋಪಿ ಮಾಡಲು ಪ್ರಯತ್ನ ನಡೆದಿದೆ ಎಂದು ಹೇಳಿದರು. ನಂತರ ಬಂದ ಸಿಐಡಿ ತನಿಖೆಯೂ ಸಮರ್ಪಕವಾಗಿಲ್ಲ. ಶಾಸಕ ಹರೀಶ್ ಪೂಂಜ ಸೇರಿದಂತೆ ಹಲವರ ರಾಜಕೀಯ ಒತ್ತಡದಿಂದ ತನಿಖೆ ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿದರು.

ಶ್ರೀಧರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ವರದಿ ನೀಡಿ ಪ್ರಕರಣವನ್ನು ತಪ್ಪಿಸುವ ಪ್ರಯತ್ನ ನಡೆದಿದೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಹೊಟ್ಟೆಗೆ ಅಲ್ಪ ಪ್ರಮಾಣದಲ್ಲಿ ವಿಷ ಪತ್ತೆಯಾಗಿದ್ದರೂ ಅದು ಸಾವಿಗೆ ಕಾರಣವಲ್ಲ; ತಲೆಗೆ ಹೊಡೆದ ಪೆಟ್ಟಿನಿಂದ ರಕ್ತಸ್ರಾವವಾಗಿ ಸಾವಾಗಿದೆ ಎಂದು ವರದಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿಯ ತೀವ್ರ ಪ್ರತಿಭಟನೆ ಬಳಿಕ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ನ್ಯಾಯಾಲಯಕ್ಕೆ ಸಮರ್ಪಕ ವರದಿ ಸಲ್ಲಿಸದ ಕಾರಣ ನಾಲ್ಕು ತಿಂಗಳಲ್ಲಿ ಅವರಿಗೆ ಜಾಮೀನು ದೊರೆತಿದೆ. ಮಾಜಿ ಶಾಸಕ ವಸಂತ ಬಂಗೇರ ಅವರ ಮೂಲಕ ಆಗಿನ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಸರ್ಕಾರ ಎಸ್‌ಐಟಿ ರಚಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಡಿಎಸ್‌ಎಸ್ ತಾಲೂಕು ಸಂಘಟನಾ ಸಂಚಾಲಕ ಶೇಖರ್ ಕುಕ್ಕೇಡಿ, ತಾಲೂಕು ಸಂಚಾಲಕ ರಮೇಶ್, ತಾಲೂಕು ಸಂಘಟನಾ ಸಂಚಾಲಕ ಪ್ರಭಾಕರ ಶಾಂತಿಕೋಡಿ, ಖಜಾಂಚಿ ಶ್ರೀಧರ ಕಳೆಂಜ ಹಾಗೂ ಪ್ರಮುಖರಾದ ನಾಗರಾಜ್ ಲಾಯಿಲ, ಅನಂತ ಮುಂಡಾಜೆ, ನಾರಾಯಣ ಪುದುವೆಟ್ಟು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News