×
Ad

ಭಾರೀ ಮಳೆ: ಬಿಳಿಯೂರು ಅಣೆಕಟ್ಟಿನ ಗೇಟು ತೆರವಿಗೆ ಸಂಕಷ್ಟ

Update: 2025-05-27 00:06 IST

ಉಪ್ಪಿನಂಗಡಿ: ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಕಟ್ಟಿರುವ ಅಣೆಕಟ್ಟಿನ ಎಲ್ಲಾ ಗೇಟುಗಳನ್ನು ತೆರವುಗೊಳಿಸಲು ಭಾರೀ ಮಳೆ ಅಡ್ಡಿಪಡಿಸಿದ್ದು, ನದಿಯಲ್ಲಿ ಉಂಟಾಗಿರುವ ನೀರಿನ ಪ್ರವಾಹದೆದುರು ಗೇಟು ತೆಗೆಯುವ ಪ್ರಯತ್ನ ಮುಂದುವರೆದಿದೆ.

ಸಾಮಾನ್ಯವಾಗಿ ಮೇ ತಿಂಗಳಾಂತ್ಯದವರೆಗೆ ಅಣೆಕಟ್ಟಿನಲ್ಲಿ ಹಿನ್ನೀರು ಉಳಿಸಿಕೊಳ್ಳುವುದು ನಿಯಮವಾಗಿದ್ದರೂ, ಈ ಬಾರಿ ಮುಂಗಾರು ಮಾರುತ ಅವಧಿಗಿಂತ ಮೊದಲೇ ಜಿಲ್ಲೆಯನ್ನು ಪ್ರವೇಶಿಸಲಿದೆ ಎಂಬ ಹವಾಮಾನ ಇಲಾಖಾ ವರದಿಯ ಆಧಾರದಲ್ಲಿ ಮೇ 21 ರಿಂದಲೇ ಗೇಟು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆದರೆ ಆ ವೇಳೆ ಚಂಡಮಾರುತದಿಂದಾಗಿ ಈ ಪರಿಸರದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಅಚ್ಚರಿ ಎಂಬಂತೆ ನೇತ್ರಾವತಿ ನದಿಯು ಮೇ ತಿಂಗಳಲ್ಲೇ ಮೈ ದುಂಬಿ ಹರಿಯುವಂತಾಗಿದೆ. ಇದರಿಂದಾಗಿ ಪೂರ್ಣ ಪ್ರಮಾಣದ ಗೇಟು ತೆರವು ಕಾರ್ಯಾಚರಣೆ ಅಸಾಧ್ಯವಾಗಿದ್ದು, ನದಿಯಲ್ಲಿ ನೀರಿನ ಪ್ರವಾಹದ ಒತ್ತಡವನ್ನು ಎದುರಿಸಿ ಗೇಟು ತೆರವು ಕಾರ್ಯಾಚರಣೆ ಮಂದಗತಿಯಲ್ಲಿ ಮುಂದುವರೆದಿದೆ.

ಪ್ರಸಕ್ತ ನದಿಯಲ್ಲಿ ಬಿರುಸಿನ ಮಳೆಗಾಲದಲ್ಲಿ ನದಿಯ ನೀರಿನ ಹರಿಯುವಿಕೆ ಇದ್ದಂತೆ ನೀರಿನ ಹರಿಯುವಿಕೆ ಇದ್ದು, ನದಿ ನೀರಿನಲ್ಲಿ ಕಾಡಿನಿಂದ ಭಾರೀ ಪ್ರಮಾಣದ ಕಸಕಡ್ಡಿಗಳು ಮರದ ದಿಮ್ಮಿಗಳು ನೆರೆ ನೀರಿನಲ್ಲಿ ಕೊಚ್ಚಿ ಬರತೊಡಗಿದೆ. ಇದೆಲ್ಲವೂ ಬಿಳಿಯೂರು ಅಣೆಕಟ್ಟಿನ ಗೇಟುಗಳಲ್ಲಿ ಸಿಲುಕಿಕೊಂಡಿದ್ದು, ಗೇಟು ತೆರವು ಕಾರ್ಯಾಚರಣೆಗೆ ತಡೆಯೊಡ್ದಬಹುದೆಂಬ ಭೀತಿ ಕಾಡುತ್ತಿದೆ.

42 ಗೇಟುಗಳ ಪೈಕಿ 15 ಗೇಟು ತೆರವು:

ಈ ಬಗ್ಗೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖಾ ಸಹಾಯಕ ಅಭಿಯಂತರರಾದ ಶಿವಪ್ರಸನ್ನ ಅವರು, ನೇತ್ರಾವತಿ ನದಿಯಲ್ಲಿನ ಕೆಳ ಭಾಗದ ಅಣೆಕಟ್ಟುಗಳ ಗೇಟುಗಳನ್ನು ತೆರವುಗೊಳಿಸದೆ ಬಿಳಿಯೂರು ಅಣೆಕಟ್ಟಿನ ಗೇಟು ತೆರವು ಕಾರ್ಯಾಚರಣೆ ನಡೆಸುವುದು ಅಸಾಧ್ಯವಾಗಿತ್ತು. ಈ ಕಾರಣಕ್ಕಾಗಿ ಅವಧಿ ಮುಂಚಿತ ಮುಂಗಾರು ಆಗಮನದ ಮಾಹಿತಿ ಲಭ್ಯವಾಗಿದ್ದರೂ ಪೂರಕ ಸ್ಥಿತಿಗತಿಗಾಗಿ ಕಾಯಲೇಬೇಕಾಗಿತ್ತು. ಈ ಮಧ್ಯೆ ಮೇ ತಿಂಗಳ ನಾಲ್ಕನೇ ವಾರದಲ್ಲಿ ಬಿಳಿಯೂರು ಅಣೆಕಟ್ಟಿನ ಗೇಟು ತೆರವಿಗೆ ಕ್ರಮಕೈಗೊಳ್ಳಲಾಯಿತಾದರೂ, ಚಂಡಮಾರುತದಿಂದಾಗಿ ನಿರಂತರ ಭಾರೀ ಮಳೆ ಸುರಿದು ನದಿಯಲ್ಲಿ ಮೈದುಂಬಿ ನೀರು ಹರಿಯತೊಡಗಿತು. ಇದರಿಂದಾಗಿ ಸುಲಲಿತ ಗೇಟು ತೆರವು ಕಾರ್ಯಾಚರಣೆಗೆ ಅಡೆತಡೆಯುಂಟಾಗಿದೆ. ಆದಾಗ್ಯೂ 42 ಗೇಟುಗಳ ಪೈಕಿ 15 ಗೇಟುಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆದಿದ್ದು, ಇದರ ಪೈಕಿ 9 ಗೇಟುಗಳನ್ನು ಪೂರ್ಣವಾಗಿ ತೆರವು ಮಾಡಲಾಗಿದೆ. ಉಳಿದ ಆರು ಗೇಟುಗಳ ಪೂರ್ಣ ತೆರವಿಗೆ ಪ್ರಕ್ರಿಯೆ ನಡೆಯುತ್ತಿದ್ದು, ಮಂಗಳವಾರದ ಒಳಗಾಗಿ ಅದು ಪೂರ್ಣಗೊಳ್ಳಬಹುದಾಗಿದೆ. ಮಿಕ್ಕಿ ಉಳಿದ ಗೇಟುಗಳನ್ನು ನದಿಯ ನೀರಿನ ಪ್ರವಾಹದ ವೇಗ ಕಡಿಮೆಯಾದಾಕ್ಷಣ ತೆರವುಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News