ಸಂಘ ಸಂಸ್ಥೆಗಳ ಉತ್ತಮ ಕಾರ್ಯಗಳಿಂದ ಸಮಾಜ ಉನ್ನತಿ: ಅದಮಾರು ಶ್ರೀ
ಉಡುಪಿ: ಸಂಘ ಸಂಸ್ಥೆಗಳಿಂದ ಉತ್ತಮ ಕಾರ್ಯಗಳು ನಡೆದರೆ ಅದು ಸಮಾಜದ ಉನ್ನತಿ ಕಾರಣ ಆಗುತ್ತದೆ ಎಂದು ಅದಮಾರು ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮೂಡುಪೆರಂಪಳ್ಳಿಯ ವಿಶ್ವಪ್ರಿಯ ಬಯಲು ರಂಗಮಂಟಪದಲ್ಲಿ ಶುಕ್ರವಾರ ನಡೆದ ನವ ಚೈತನ್ಯ ಯುವಕ ಮಂಡಲದ 40ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ವಜ್ರ ಚೈತನ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ಯಕ್ಷಗಾನ ತರಬೇತಿ ಯೋಜನೆ ಮಕ್ಕಳಿಗೆ ಇಷ್ಟೊಂದು ವ್ಯಾಪಕವಾಗಲು ಕಾರಣ ಯಕ್ಷ ಶಿಕ್ಷಣ. ಹಾಗೆಯೇ ಯಕ್ಷಗಾನದ ಇನ್ನೊಂದು ಪ್ರಕಾರವಾದ ಮೂಡಲಪಾಯ ಯಕ್ಷಗಾನಕ್ಕೂ ಹೆಚ್ಚಿನ ಪ್ರೋತ್ಸಾಹ ಸಿಗ ಬೇಕಿದೆ ಎಂದು ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.
ನವಚೈತನ್ಯ ಯುವಕ ಮಂಡಲದ ಅಧ್ಯಕ್ಷರಾದ ಜಿತೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆಗೆ ಲಿಯೋನ ಒಲಿವೆರ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಹಿರಿಯ ಸದಸ್ಯರಾದ ಸುರೇಂದ್ರ ಪೂಜಾರಿ ಮತ್ತು ರವೀಂದ್ರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಆರ್ಥಿಕವಾಗಿ ಹಿಂದುಳಿದ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಈಶ್ವರ್ ಮಲ್ಪೆ ಅವರಿಗೆ ವಾಕಿಟಾಕಿ ಖರೀದಿಸಲು ಸಂಘದ ವತಿಯಿಂದ ಸಹಾಯಧನ ವಿತರಿಸಲಾಯಿತು. ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಗಿರಿಜಾ ಶಿವರಾಮ ಶೆಟ್ಟಿ, ಮಾಜಿ ನಗರಸಭಾ ಸದಸ್ಯೆ ಅನಿತಾ ಬೆಳಿಂಡ, ಸಂಸ್ಥೆಯ ಉಪಾಧ್ಯಕ್ಷ ವಿಪಿನ್, ಕಾರ್ಯದರ್ಶಿ ವಿಶಾಲ್, ಕೋಶಾಧಿಕಾರಿ ಶಂರ್ಕ ಕುಲಾಲ್ ಪೆರಂಪಳ್ಳಿ ಉಪಸ್ಥಿತರಿದ್ದರು.