×
Ad

ಬೈಕಂಪಾಡಿ | ಯುವಕನ ಕೊಲೆ : ಆರೋಪಿಯ ಬಂಧನ

Update: 2025-12-09 00:19 IST

ಪಣಂಬೂರು: ಮದ್ಯ ಸೇವನೆಗೆ ಹಣ ನೀಡಿಲ್ಲ ಎಂದು ಜಗಳವಾಡಿರುವುದಕ್ಕೆ ಯುವಕನೋರ್ವನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ರವಿವಾರ ತಡರಾತ್ರಿ ಬೈಕಂಪಾಡಿಯಲ್ಲಿ ನಡೆದಿದೆ.

ಕೊಲೆಯಾದವರನ್ನು ಉತ್ತರ ಪ್ರದೇಶ ಮೂಲದ ನಿವಾಸಿ, ಸದ್ಯ ಬೈಕಂಪಾಡಿಯಲ್ಲಿ ವಾಸವಿರುವ ಸಚಿನ್ ಕುಮಾರ್ ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿ ಜಿಲ್ಲೆ, ಪ್ರಸಕ್ತ ಬೈಕಂಪಾಡಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಪ್ರವೀಣ್ ಶಿವಶಂಕರಪ್ಪ ಕೊಲೆ ಆರೋಪಿ ಎಂದು ತಿಳಿದು ಬಂದಿದೆ.

ಸಚಿನ್ ಕುಮಾರ್ ಮತ್ತು ಪ್ರವೀಣ್ ಶಿವಶಂಕರಪ್ಪ ನೆರೆಹೊರೆಯ ಮನೆಗಳಲ್ಲಿ ವಾಸವಾಗಿದ್ದರು.

ರವಿವಾರ ಸಚಿನ್ ಮದ್ಯ ಖರೀದಿಸಲೆಂದು ಶಿವ ಶಂಕರಪ್ಪನಲ್ಲಿ ಹಣ ಕೇಳಿದ್ದರು. ಆತ ಹಣ ನೀಡದೆ ಹಿಂದೆ ಕಳುಹಿಸಿದ್ದನೆನ್ನಲಾಗಿದೆ.

ಸಚಿನ್ ಕುಮಾರ್ ತಡರಾತ್ರಿ ಮದ್ಯ ಸೇವಿಸಿ ಶಿವ ಶಂಕರಪ್ಪನ ಮನೆ ಬಳಿ ಬಂದು ಆತನ ತಂದೆ , ತಾಯಿಗೆ ಬೈದಿದ್ದಾನೆ ಎನ್ನಲಾಗಿದೆ. ಈ ವೇಳೆ ಆಕ್ರೋಶಗೊಂಡ ಶಿವಶಂಕರ್ ಸಚಿನ್‌ರ ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆಗೈದಿದ್ದಾನೆ ಎನ್ನಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪಣಂಬೂರು ಪೊಲೀಸ್ ನಿರೀಕ್ಷಕ ಸಲೀಮ್ ಅಬ್ಬಾಸ್ ಅವರ ನೇತೃತ್ವದ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿತ್ತು.

ಕೊಲೆ ನಡೆದ ಗಂಟೆಯೊಳಗಾಗಿ ಆರೋಪಿಯ ಬಂಧನ:

ಮದ್ಯ ಸೇವನೆಗೆ ಹಣ ನೀಡಿಲ್ಲ ಎಂದು ಜಗಳವಾಡಿರುವುದಕ್ಕೆ ಚೂರಿಯಿಂದ ಇರಿದು ಯವಕನೋರ್ವನನ್ನು ಕೊಲೆಗೈದ ಪ್ರಕರಣದ ಆರೋಪಿಯನ್ನು ಪಣಂಬೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಘಟನೆ ತಡರಾತ್ರಿ 11:45ರ ಸುಮಾರಿಗೆ ನಡೆದಿದ್ದು, 12ರ ವೇಳೆಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಸಂಬಂಧ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ನಿರೀಕ್ಷಕ ಸಲೀಮ್ ಅಬ್ಬಾಸ್ ನೇತೃತ್ವದ ಪಣಂಬೂರು ಪೊಲೀಸರ ತಂಡ, ತಲೆಮರೆಸಿಕೊಳ್ಳುವ ಸಲುವಾಗಿ ಮಂಗಳೂರು ರೈಲು ನಿಲ್ದಾಣಕ್ಕೆ ತೆರಳಿರುವ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿಕೊಂಡ ಪೊಲೀಸರು ಘಟನೆ ನಡೆದ ಗಂಟೆಯ ಒಳಗಾಗಿ ಬಂಧಿಸುವಲ್ಲಿ ಯಶಸ್ವಿಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News