ಡಿಜಿಟಲ್ ಪಾವತಿ ಸಕ್ರಿಯತೆ, ಆವಿಷ್ಕಾರಗಳು ಜಗತ್ತಿಗೆ ಮಾದರಿಯಾಗಿವೆ: ಸುರೇಶ್ ಶೆಟ್ಟಿ
ಕಾರ್ಕಳ : ಇಂದಿನ ಜಾಗತಿಕ ಹಣಕಾಸು ಕ್ಷೇತ್ರಕ್ಕೆ ಹೋಲಿಸಿದರೆ, ಭಾರತದ ಯುಪಿಐ, ಡಿಜಿಟಲ್ ಪಾವತಿ ಸಕ್ರಿಯತೆ ಸೇರಿದಂತೆ ಇತರ ಆವಿಷ್ಕಾರಗಳು ಜಗತ್ತಿಗೆ ಮಾದರಿಯಾಗಿವೆ," ಎಂದು ಜಾಗತಿಕ ಪ್ರಮುಖ ಹಣಕಾಸು ಸಂಸ್ಥೆಯಾದ ನ್ಯೂಯಾರ್ಕ್‌ನ ಜೆ.ಪಿ. ಮೋರ್ಗನ್ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಸುರೇಶ್ ಶೆಟ್ಟಿ ಹೇಳಿದರು.
ಶನಿವಾರ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ 2025ನೇ ಸಾಲಿನ ಬಿ.ಇ. ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಯಾವುದಕ್ಕೂ ಹೊಂದಿಕೊಳ್ಳದೆ, ಬದಲಾವಣೆಗೆ ತೆರೆದುಕೊಳ್ಳಬೇಕು ಮತ್ತು ಕುತೂಹಲ ವನ್ನು ಬೆಳೆಸಿಕೊಳ್ಳಬೇಕು," ಎಂದು ಕಿವಿಮಾತು ಹೇಳಿದರು.
ನಿಟ್ಟೆ ವಿ.ವಿ. ಕುಲಸಚಿವ ಡಾ. ಹರ್ಷ ಹಾಲಹಳ್ಳಿ ಅವರು ಶುಭ ಹಾರೈಸಿದರು. ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಚಿನ್ನ ಮತ್ತು ಬೆಳ್ಳಿಯ ಪದಕ ನೀಡುವ ಮೂಲಕ ಗುರುತಿಸಲಾಯಿತು. 2025ನೇ ಸಾಲಿನಲ್ಲಿ ಬಿ.ಇ. ಪದವೀಧರರಾದ ಬಯೋಟೆಕ್ನಾಲಜಿ, ಸಿವಿಲ್ ಎಂಜಿನಿಯರಿಂಗ್, ಕಂಪ್ಯೂಟರ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ರೊಬೋಟಿಕ್ಸ್ ಆ್ಯಂಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಈ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಉಪಪ್ರಾಂಶುಪಾಲ ಡಾ. ನಾಗೇಶ್ ಪ್ರಭು, ಪರೀಕ್ಷಾ ನಿಯಂತ್ರಕ ಡಾ. ಸುಬ್ರಹ್ಮಣ್ಯ ಭಟ್, ಉಪ ಕುಲಸಚಿವೆ ಡಾ. ರೇಖಾ ಭಂಡಾರ್ಕರ್, ಇಂಡಸ್ಟ್ರೀ ಇನ್ಶ್ಟಿಟ್ಯೂಟ್ ಇಂಟರ್ಯಾಕ್ಷನ್ ನಿರ್ದೇಶಕ ಡಾ. ಪರಮೇಶ್ವರನ್, ಸ್ಟೂಡೆಂಟ್ ವೆಲ್ಫೇರ್ ಡೀನ್ ಡಾ. ನರಸಿಂಹ ಬೈಲಕೇರಿ, ಡೀನ್ ಡಾ. ಸುದೇಶ್ ಬೇಕಲ್, ಪ್ರಮುಖರಾದ ಡಾ. ಶ್ರೀನಿವಾಸ್ ರಾವ್ ಬಿ.ಆರ್., ಡಾ. ಐ.ಆರ್. ಮಿತ್ತಂತಾಯ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ವಾರ್ಷಿಕ ವರದಿ ವಾಚಿಸಿ ಸ್ವಾಗತಿಸಿದರು. ಡಾ. ವೆಂಕಟೇಶ್ ಕಾಮತ್ ವಂದಿಸಿ, ಸಹಾಯಕ ಪ್ರಾಧ್ಯಾಪಕಿ ಪ್ರೇಮಿತಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.