×
Ad

ದ.ಕ. ಜಿಲ್ಲೆಯ ರಸ್ತೆಗಳ ದುಸ್ಥಿತಿ: 1 ವರ್ಷದಲ್ಲಿ 702 ಅಪಘಾತ, 122 ಮಂದಿ ಮೃತ್ಯು!

ತಕ್ಷಣ ದುರಸ್ತಿ ಕಾರ್ಯಕ್ಕೆ ಮುಖ್ಯಮಂತ್ರಿಗೆ ಶಾಸಕ ಮಂಜುನಾಥ ಭಂಡಾರಿ ಮನವಿ

Update: 2025-09-20 18:52 IST

ಮಂಗಳೂರು, ಸೆ.20: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರಂತರ ಮಳೆಯ ಪರಿಣಾಮ ಹಾಗೂ ವಾಹನ ಸಂಚಾರದ ದಟ್ಟಣೆಯಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಹುತೇಕ ರಸ್ತೆಗಳಿಗೆ ಗಂಭೀರ ಹಾನಿಯಾ ಗಿದೆ. ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಸರ್ವಿಸ್ ರಸ್ತೆಗಳ ದುಸ್ಥಿತಿಯಿಂದ ರಸ್ತೆ ಅಪಘಾತಗಳು ಗಣನೀಯವಾಗಿ ಏರಿಕೆಯಾಗಿದೆ. ಸಾರ್ವಜನಿಕರ ಜೀವ ಭದ್ರತೆಗೆ ದೊಡ್ಡ ಸವಾಲುಂಟಾಗಿದೆ. ಈಗಾಗಲೇ ನೂರಾರು ಮಂದಿ ಸಾವನ್ನಪ್ಪಿರುವುದು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸುತ್ತದೆ. ಅಪಘಾತ, ಸಾವು-ನೋವುಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ. 2025ರಲ್ಲೇ ದ.ಕ. ಜಿಲ್ಲೆಯಲ್ಲಿ 702 ರಸ್ತೆ ಅಪಘಾತಗಳು ದಾಖಲಾಗಿವೆ. ಅದರಲ್ಲಿ 122 ಮಂದಿ ಮೃತಪಟ್ಟರೆ 815 ಮಂದಿ ಗಾಯಗೊಂಡಿದ್ದಾರೆ. ಆದ್ದರಿಂದ ರಸ್ತೆಯನ್ನು ಶೀಘ್ರ ದುರಸ್ತಿಪಡಿಸುವಂತೆ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ವರದಿಯಾದ ಒಟ್ಟು ಅಪಘಾತಗಳು 702. ಅದರಲ್ಲಿ ಮಾರಣಾಂತಿಕ ಪ್ರಕರಣಗಳು 119. ಮಾರಣಾಂತಿಕವಲ್ಲದ ಅಪಘಾತಗಳು 583. ಒಟ್ಟು ಸಾವುಗಳು 122. ಒಟ್ಟು ಗಾಯಾಳುಗಳು 815. ಪಾದಚಾರಿ ಸಾವುಗಳು 44. ಗಾಯಗೊಂಡ ಪಾದಚಾರಿಗಳು 149. ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರರ ಸಾವುಗಳು 63. ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರ ಗಾಯಾಳುಗಳು 416. ಈ ಅಂಕಿಅಂಶಗಳು ರಸ್ತೆಯ ಪರಿಸ್ಥಿತಿಯ ಗಂಭೀರತೆ ಸಾಕ್ಷಿಯಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

*ರಾಜ್ಯ ಹೆದ್ದಾರಿ-52 ಅತ್ಯಂತ ದುಸ್ಥಿತಿಯಲ್ಲಿದೆ. ಕುಂದಾಪುರ ತೀರ್ಥಹಳ್ಳಿ 52 ರಾಜ್ಯ ಹೆದ್ದಾರಿಯು 93 ಕಿ.ಮೀ ಉದ್ದವಿದೆ. ಕುಂದಾಪುರ, ಬಸ್ರೂರ್,ಸಿದ್ದಾಪುರ, ಹೊಸಂಗಡಿ, ಬಾಳೆಬರೆ ಘಾಟ್, ಮಾಸ್ತಿಕಟ್ಟೆ, ಕೈಮರ, ತೀರ್ಥಹಳ್ಳಿ ಮುಂತಾದ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಈ ರಸ್ತೆ ಕಳೆದ 40 ವರ್ಷಗಳಿಂದ ಅಗಲವಾಗದ ಕಾರಣ ಸಂಚಾ ರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಕಂಡ್ಲೂರು ಸೇತುವೆ 1960ರಲ್ಲಿ ವಾರಾಹಿ ನದಿಗೆ ನಿರ್ಮಿಸಲ್ಪಟ್ಟಿದ್ದು, ಈಗ ಕುಸಿಯುವ ಅಂಚಿನಲ್ಲಿದೆ.

ಹಾಗಾಗಿ ಇದರ ಪುನಃ ನಿರ್ಮಾಣದ ಅಗತ್ಯವಿದೆ. ಅನುಪಾತದ ಪ್ರಕಾರ ರಸ್ತೆಯ ಅಗಲವಿಲ್ಲದ ಹಾಗೂ ರಸ್ತೆ ಬದಿ ಸ್ಥಳಾವಕಾಶ ಇಲ್ಲದ ಕಾರಣ ಅಪಘಾತಗಳ ಪ್ರಮಾಣ ಹೆಚ್ಚಾಗಿದೆ. ಈ ಹೆದ್ದಾರಿಯನ್ನು 4 ಲೇನ್ ಮಾಡುವುದು ಅಥವಾ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವುದು ಅವಶ್ಯಕವಾಗಿದೆ ಎಂದು ಮಂಜುನಾಥ ಭಂಡಾರಿ ವಿವರಿಸಿದ್ದಾರೆ.

*ಘಾಟ್ ಪ್ರದೇಶಗಳ ಸಮಸ್ಯೆಗಳು: ದ.ಕ., ಉಡುಪಿ ಜಿಲ್ಲೆಗಳ ಪ್ರಮುಖ ಘಾಟ್ ರಸ್ತೆಗಳನ್ನು (ಅಗುಂಬೆ, ಶಿರಾಡಿ, ಚಾರ್ಮಾಡಿ, ಬಾಳೆಬರೆ, ಸಂಪೇಕಟ್ಟೆ, ನಾಗೋಡಿ) ಸಂಚಾರಕ್ಕೆ ಬಳಸಲಾಗುತ್ತಿದೆ. ಇವು ಅತ್ಯಂತ ಕಿರಿದಾಗಿವೆ. ಇವುಗಳಲ್ಲಿ ವರ್ಷಪೂರ್ತಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ತುರ್ತುಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್‌ಗಳಿಗೂ ಅಡೆತಡೆ ಉಂಟಾಗುತ್ತಿದೆ. ಪ್ರವಾಸೋದ್ಯಮ ಮತ್ತು ಸ್ಥಳೀಯ ವ್ಯಾಪಾರಕ್ಕೆ ತೀವ್ರ ಹಾನಿಯುಂಟು ಮಾಡುತ್ತದೆ. ಈ ರಸ್ತೆ ಬೆಂಗಳೂರು, ಮಂತ್ರಾಲಯ, ಬಳ್ಳಾರಿ, ರಾಯಚೂರು, ಹೈದರಾಬಾದ್ ಇತ್ಯಾದಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಅವಕಾಶ ಹೊಂದಿದೆ. ಹಾಗಾಗಿ ಈ ರಸ್ತೆಗಳನ್ನು ಸುಧಾರಿಸಿದಲ್ಲಿ ದ.ಕ. ಅದರಲ್ಲೂ ವಿಶೇಷವಾಗಿ ಕುಂದಾಪುರ ಮತ್ತು ಬೈಂದೂರು ಕಡಲತೀರ ಪ್ರದೇಶ ಮತ್ತು ದೇವಾಲಯಗಳಿರುವ ಈ ಪ್ರದೇಶದಲ್ಲಿ ಪ್ರವಾಸೋದ್ಯಮವು ಉತ್ತೇಜನ ಪಡೆಯಲಿದೆ ಎಂದು ತಿಳಿಸಿದ್ದಾರೆ.

*ಅಭಿವೃದ್ಧಿ ಯೋಜನೆಗಳಲ್ಲಿ ನಿರ್ಲಕ್ಷ್ಯ!

ಕರ್ಣಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆಯಡಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಿಂದ ಅನೇಕ ಹೆದ್ದಾರಿ ಗಳನ್ನು 4 ಲೇನ್ ಮಾಡಲಾಗಿದೆ. ಆದರೂ ರಾಜ್ಯ ಹೆದ್ದಾರಿ-52 ಮಾತ್ರ ಇದರಿಂದ ಹೊರಗಿಟ್ಟಿರುವುದು ತಾರತಮ್ಯ ಧೋರಣೆಯಾಗಿದೆ. ರಾಜ್ಯ ಸರಕಾರವು ಏಷಿಯನ್ ಅಭಿವೃದ್ಧಿ ಬ್ಯಾಂಕ್, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ರಾಜ್ಯ ಹೆದ್ದಾರಿ 52 ಅನ್ನು ಸುಧಾರಿಸಲು ಹಣಕಾಸು ಒದಗಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಮಂಜುನಾಥ್ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News