ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಮುಹಮ್ಮದ್ ಅಶ್ಮಿಲ್ ಶಾಹ್ ಹುದವಿಗೆ ಸನ್ಮಾನ
ಮಂಗಳೂರು: ಕೇಂದ್ರ ಲೋಕ ಸೇವಾ ಆಯೋಗದಲ್ಲಿ 382ನೇ ರ್ಯಾಂಕ್‌ನಲ್ಲಿ ತೇರ್ಗಡೆಯಾದ ಮುಹಮ್ಮದ್ ಅಶ್ಮಿಲ್ ಶಾಹ್ ಹುದವಿಗೆ ಸಂಸ್ಥೆಯ ವತಿಯಿಂದ ಕುನಿಯ ಕ್ಯಾಂಪಸ್‌ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭವನ್ನು ಉದ್ಘಾಟಿಸಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಶ್ಮಿಲ್ ಶಾಹ್ ಹುದವಿ ಅವರನ್ನು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭ ಮಾತನಾಡಿದ ಶಾಹಿದ್ ತೆಕ್ಕಿಲ್ ಅವರು ಅಶ್ಮಿಲ್ ಶಾಹ್ ಹುದವಿ ಈ ಮಟ್ಟಕ್ಕೆ ಬೆಳೆಯಲು ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮತ್ತು ಯುಪಿ ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಐಎಎಸ್ ಅಕಾಡೆಮಿ ಅಪಾರ ಕೊಡುಗೆ ನೀಡಿದೆ ಕುನಿಯ ಇಬ್ರಾಹೀಂ ಅಹ್ಮದ್ ಅಲಿ ಹಾಜಿ ಅವರ ದೂರದೃಷ್ಟಿ ಕೇವಲ ಎರಡು ವರ್ಷದಲ್ಲಿ ಫಲ ನೀಡಿದೆ ಮುಂದೆ ಈ ಸಂಸ್ಥೆಯ ಮುಖಾಂತರ ಹಲವರು ಉನ್ನತ ಹುದ್ದೆಗೆ ಏರಲಿದ್ದು ಶಾಹ್ ಹುದವಿ ಯುವಕರಿಗೆ ಮತ್ತು ಸಮಾಜಕ್ಕೆ ಮಾದರಿ ಯಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಕಣ್ಣೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಕುನಿಯ ಸಂಸ್ಥೆಯ ಸಲಹೆಗಾರ ಡಾ. ಖಾದರ್ ಮಾಂಘಾಡ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಸಿ ಎಚ್ ಕುಂಞಿಂಬು, ಎ ಕೆ ಎಂ ಅಶ್ರಫ್ , ಬಿಹಾರದ ಮುಜಾಪುರ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಹಬುಲ್ಲಾ ಅನ್ಸಾರಿ,ಕಾಸರಗೋಡು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಿವಂ,ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ,ಕಾಸರಗೋಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲ ಕುಂಞ್ಞೆ, ಪೆರಿಯ ಪಂಚಾಯತ್ ಅಧ್ಯಕ್ಷೆ ಡಾ. ಸಬಿತ ,ಪಳ್ಳಿಕ್ಕೆರೆ ಪಂಚಾಯತ್ ಅಧ್ಯಕ್ಷೆ ಶೋಭನ ,ಡಾ. ಸಂತೋಷ್ ,ಸುದೀಪ್ ಮೊದಲಾದವರು ಉಪಸ್ಥಿತರಿದ್ದರು.
ಶಿಬಿಲಿ ಶಹಾದತಿ ಅವರು ಕುನಿಯ ಐ ಎ ಎಸ್ ಅಕಾಡೆಮಿ ಮತ್ತು ಶಿಕ್ಷಣ ಸಂಸ್ಥೆಯ ಬಗ್ಗೆ ವಿವರಿಸಿದರು. ಡಾ. ಲಕ್ಷ್ಮೀ ಭಾಯಿ ಸ್ವಾಗತಿಸಿ ಅಜ್ಮಲ್ ವಂದಿಸಿದರು. ನಂತರ ಎರಡು ಸಾವಿರಷ್ಟು ವಿದ್ಯಾರ್ಥಿಗಳು ಸಾರ್ವಜನಿಕರು ಸಾಧಕರ ಜೊತೆ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.