ಸುಳ್ಯ : ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್–ಮದ್ರಸ ಆಶ್ರಯದಲ್ಲಿ ಸೌಹಾರ್ದ ಇಫ್ತಾರ್ ಸಂಗಮ
ಸುಳ್ಯದ ಜನತೆಯ ಪ್ರೀತಿಗೆ ನಾನು ಎಂದಿಗೂ ಚಿರಋಣಿ: ಹೆಚ್. ಎಂ. ನಂದಕುಮಾರ್
ಸುಳ್ಯ: ಮುಸ್ಲಿಮರ ಪವಿತ್ರ ರಂಜಾನ್ ತಿಂಗಳ 19ನೇ ಉಪವಾಸದ ಪ್ರಯುಕ್ತ ಸುಳ್ಯ ಜಯನಗರದ ಜನ್ನತುಲ್ ಉಲೂಮ್ ಮಸ್ಜಿದ್ ಹಾಗೂ ಮದ್ರಸ ಆಶ್ರಯದಲ್ಲಿ ಇಫ್ತಾರ್ ಸೌಹಾರ್ದ ಕೂಟವು ಜಯನಗರ ಬುಸ್ತಾನುಲ್ ಉಲೂಮ್ ಮದ್ರಸ ವಠಾರದಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ಮೊಗರ್ಪಣೆ ಜುಮ್ಮಾ ಮಸ್ಜಿದ್ ಅಧ್ಯಕ್ಷ ಸಿ.ಎಂ. ಉಸ್ಮಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಧಾರ್ಮಿಕ ಗುರುಗಳಾದ ಶಫೀಕ್ ಹಿಮಮಿ ದುಆ ನೆರವೇರಿಸಿದರು. ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಡಿಕೇರಿ ಉದ್ಯಮಿ ಹಾಗೂ ಕೆಪಿಸಿಸಿ ಸಂಯೋಜಕ ಹೆಚ್.ಎಂ. ನಂದಕುಮಾರ್ ಮಾತನಾಡಿ, “ಸುಳ್ಯದ ಜನತೆ ಎಲ್ಲರನ್ನು ಭೇದಭಾವ ಮರೆತು ಪ್ರೀತಿಯಿಂದ ಕಾಣುವವರು. ಇದರಿಂದ ನಿಜವಾದ ಸೌಹಾರ್ದ ಮೂಡುತ್ತದೆ. ಸುಳ್ಯದೊಂದಿಗೆ ನನಗೆ ಕಳೆದ 8 ವರ್ಷಗಳ ಒಡನಾಟ ಅವಿಸ್ಮರಣೀಯವಾಗಿದೆ. ಜಯನಗರ ಮಸ್ಜಿದ್‌ಗೆ ಸಂಪೂರ್ಣ ಸಹಕಾರ ಮತ್ತು ಕೊಡುಗೆ ನೀಡಲು ನಾನು ಬದ್ಧನಾಗಿದ್ದೇನೆ” ಎಂದು ಹೇಳಿದರು.
ವೇದಿಕೆಯಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಗ್ಯಾರಂಟಿ ತಾಲೂಕು ಸಮಿತಿ ಸದಸ್ಯ ಭವಾನಿ ಶಂಕರ್ ಕಲ್ಮಡ್ಕ, ಉದ್ಯಮಿ ಮಹಮ್ಮದ್ ಅಲಿ ಕುಂತೂರು, ಶ್ರೀ ಶಾರದಾಂಭ ಸೇವಾ ಸಮಿತಿ ಗೌರವಾಧ್ಯಕ್ಷ ಗೋಕುಲದಾಸ್, ಮಂಜುನಾಥ್ ಮಡ್ತಿಲ, ಮದ್ರಸ ಹಾಗೂ ಮಸ್ಜಿದ್ ಸಮಿತಿ ಪದಾಧಿಕಾರಿಗಳಾದ ನವಾಜ್ ಪಂಡಿತ್, ಗುತ್ತಿಗೆದಾರ ಝಹಿರ್ ಜಯನಗರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೆಚ್.ಎಂ. ನಂದಕುಮಾರ್ ಹಾಗೂ ಮಹಮ್ಮದ್ ಅಲಿ ಅವರನ್ನು ಗೌರವಿಸಲಾಯಿತು. ಪತ್ರಕರ್ತ ಹಸೈನಾರ್ ಜಯನಗರ ಕಾರ್ಯಕ್ರಮವನ್ನು ನಿರೂಪಿಸಿದರು.
ಕೊನೆಯಲ್ಲಿ ಪ್ರಾರ್ಥನಾ ಸಂಗಮ ಮತ್ತು ಅನ್ನದಾನ ನಡೆಯಿತು.