×
Ad

ದ.ಕ. : ನಿಷ್ಕ್ರಿಯ ಬ್ಯಾಂಕ್ ಖಾತೆಗಳಲ್ಲಿ 140 ಕೋಟಿ ರೂ. ; ಗ್ರಾಹಕರಿಗೆ ಹಿಂತಿರುಗಿಸಲು ಬ್ಯಾಂಕ್‌ಗಳಿಗೆ ಸಂಸದ ಬ್ರಿಜೇಶ್ ಚೌಟ ಸೂಚನೆ

Update: 2025-12-24 14:52 IST

ಮಂಗಳೂರು, ಡಿ.24: ದ.ಕ. ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ 10 ವರ್ಷ ಹಳೆಯ ವಹಿವಾಟು ರಹಿತ ಖಾತೆಗಳಲ್ಲಿ ಸುಮಾರು 140 ಕೋಟಿ ರೂ.ಗಳಿದ್ದು, ಅದನ್ನು ಸಂಬಂಧಪಟ್ಟ ಗ್ರಾಹಕರು ಪಡೆದುಕೊಳ್ಳುವಲ್ಲಿ ಬ್ಯಾಂಕ್‌ಗಳು ಜಾಗೃತಿ ಮೂಡಿಸಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ದ.ಕ. ಜಿಲ್ಲಾ ಲೀಡ್ ಬ್ಯಾಂಕ್ ತಿಯಿಂದ ದ.ಕ. ಜಿಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಸಮಾಲೋಚನಾ ಸಮಿತಿ (ಡಿಸಿಸಿ) ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ವಿವಿಧ ಬ್ಯಾಂಕ್‌ಗಳಲ್ಲಿ 10 ವರ್ಷ ಮೇಲ್ಪಟ್ಟು ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 78000 ಕೋಟಿ ರೂ. ಠೇವಣಿ ಇದೆ. ಕರ್ನಾಟಕದಲ್ಲಿ ಇದು 3400 ಕೋಟಿರೂ.ಗಳಾಗಿದ್ದು, ದ.ಕ. ಜಿಲ್ಲೆಯಲ್ಲಿ 140 ಕೋಟಿ ರೂ. ಇದೆ. ಇದಲ್ಲದೆ ಇನ್ಸೂರೆನ್ಸ್, ಶೇರ್‌ಗಳು ಕೂಡಾ ಇದ್ದು ಇವಗಳನ್ನು ಗ್ರಾಹಕರಿಗೆ ಹಿಂತಿರುಗಿಸಲು ಸೂಕ್ತ ಕ್ರಮಗಳನ್ನು ವಹಿಸಬೇಕು ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಈಗಾಗಲೇ ಇಂತಹ ನಿಷ್ಕ್ರಿಯವಾಗಿದ್ದ ಖಾತೆಗಳ 20 ಕೋಟಿ ರೂ.ಗಳನ್ನು ಗ್ರಾಹಕರಿಗೆ ಪಾವತಿಸಲಾಗಿದೆ. ಉದ್ಗಮ್ (udgam.rbi.org.in ) ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡು ಗ್ರಾಹಕರು ತಮ್ಮ ಹೆಸರು, ಪಾನ್ ಅಥವಾ ಜನ್ಮ ದಿನಾಂಖದ ಮೂಲಕ ತಮ್ಮ ನಿಷ್ಕ್ರಿಯ ಖಾತೆಗಳನ್ನು ಪತ್ತೆಹಚ್ಚಬಹುದು. ಬಳಿಕ ಸಂಬಂಧಪಟ್ಟ ಬ್ಯಾಂಕ್‌ಗೆ ಕೆವೈಸಿ ದಾಖಲೆಗಲನ್ನು ಒದಗಿಸಿ ಹಣ ಪಡೆಯಯಲು ಆರ್‌ಬಿಐ ಈಗಾಗಲೇ ನಿರ್ದೇಶನ ನೀಡಿದೆ ಎಂದು ಆರ್‌ಬಿಐ ಎಜಿಎಂ ಅರುಣ್ ಕುಮಾರ್ ಪಿ. ತಿಳಿಸಿದರು.

ಪಿಎಂ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿ ಕೆಲವೊಂದು ಬ್ಯಾಂಕ್‌ಗಳವರು ಆಯ್ಕೆಯಾದ ಫಲಾನುವಿಗಳಿಗೆ ಹಣ ಮಂಜೂರಾತಿ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ವಿತರಣೆಯ ಕುರಿತಂತೆ ಮಾಹಿತಿ ಪಡೆದ ಅವರು, ಸರಕಾರ ವಿವಿಧ ಯೋಜನೆಗಳಾದ ಪಿಎಂಜೆಜೆವೈ, ಪಿಎಂಎಸ್‌ಬಿವೈ, ಪಿಎಂಜೆಡಿವೈ ಎಪಿವೈ (ಅಟಲ್ ಪಿಂಚಣಿ ಯೋಜನೆ)ಬಗ್ಗೆ ಬ್ಯಾಂಕ್‌ಗಳು ಹೆಚ್ಚಿನ ಆಸಕ್ತಿ ವಹಿಸುವಂತೆ ನಿರ್ದೇಶನ ನೀಡಿದರು.

ಮುದ್ರಾ ಯೋಜನೆಯಡಿ 2025ರ ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ 24115 ಥಾಕೆಗಳಲ್ಲಿ 414.26 ಕೋಟಿರೂ. ಸಾಲ ವಿತರಿಸಲಾಗಿದೆ. ಪ್ರಧಾನ ಮಂತ್ರಿಜನಧನ್ ಯೋಜನೆಯಡಿ 20769 ಉಳಿತಾಯ ಖಾತೆ ತೆರೆಯಲಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯಡಿ 25,564 ಮಂದಿ ನೋಂದಣಿಯಾಗಿದ್ದಾರೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 52239 ಮಂದಿಯನ್ನು ನೋಂದಣೆ ಮಾಡಲಾಗಿದೆ. ಅಟಲ್ ಪಿಂಚಣಿ ಯೋಜನೆಯಡಿ 16668 ಮಂದಿಯನ್ನು ನೋಂದಣೆ ಮಾಡಿರುವುದಾಗಿ ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ ಮಾಹಿತಿ ನೀಡಿದರು.

ಪಿಎಂ ಸ್ವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಥಮ ಕಂತಿನಲ್ಲಿ 12913, ದ್ವಿತೀಯ ಕಂತಿನಲ್ಲಿ 4854 ಹಾಗೂ ತೃತೀಯ ಕಂತಿನಲ್ಲಿ 1667 ಮಂದಿಗೆ ಹಣ ಮಂಜೂರಾಗಿದೆ. ಸೆಪ್ಟಂಬರ್ ಅತ್ಯಂಕ್ಕೆ ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ 135696.22 ಕೋಟಿ ರೂ. ಗಳಾಗಿದೆ. ಆದ್ಯತ ಮತ್ತು ಅದ್ಯತೆಯೇತರ ವಲಯಗಳಲ್ಲಿ ಒಟ್ಟು 26096.15 ಕೋಟಿ ರೂ. ಸಾಲ ವಿತರಿಸಲಾಗಿದ್ದು, ತ್ರೈಮಾಸಿಕ ಗುರಿಯ ಶೇ 80.90ರಷ್ಟು ಸಾಧನೆಯಾಗಿದೆ. ಕೃಷಿ ಕ್ಷೇತ್ರಕ್ಕೆ 6664.51 ಕೋಟಿ ರೂ. ವಿತರಣೆಯಾಗಿದೆ ಎಂದು ಕವಿತಾ ಶೆಟ್ಟಿ ವಿವರ ನೀಡಿದರು.

ಸಭೆಯಲ್ಲಿ ಕೆನರಾ ಬ್ಯಾಂಕ್‌ನ ಡಿಜಿಎಂ ಶೈಲೇಂದ್ರನಾಥ್, ನಬಾರ್ಡ್ ಡಿಡಿಎಂ ಸಂಗೀತ ಎಸ್. ಕರ್ತ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News