×
Ad

ಜೋಡಿ ಕೊಲೆ ಪ್ರಕರಣದ ಆರೋಪ ಸಾಬೀತು: ಶಿಕ್ಷೆ ಪ್ರಮಾಣ ಕಾಯ್ದಿರಿಸಿದ ನ್ಯಾಯಾಲಯ

Update: 2026-01-13 20:55 IST

ಮಂಗಳೂರು: ಸುಮಾರು ಐದು ವರ್ಷದ ಹಿಂದೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಏಳಿಂಜೆ ಗ್ರಾಮದ ಮುತ್ತಯ್ಯ ಕೆರೆ ಎಂಬಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಆಲ್ಫೋನ್ಸ್ ಸಲ್ದಾನಾ (52) ಎಂಬಾತನ ಮೇಲಿನ ಆರೋಪ ಸಾಬೀತಾಗಿದೆ. ನ್ಯಾಯಾಲಯವು ಜ.14ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.

ಆಲ್ಫೋನ್ಸ್ ಸಲ್ದಾನ ಮತ್ತು ನೆರೆಮನೆಯ ವಿನ್ಸಿ ಯಾನೆ ವಿನ್ಸೆಂಟ್ ಡಿಸೋಜ ಮಧ್ಯೆ ವೈಮನಸ್ಸು ಇತ್ತೆನ್ನಲಾಗಿದೆ. ಅಂದರೆ ವಿನ್ಸಿಯ ಮನೆಯ ಜಾಗಕ್ಕೆ, ಮನೆಯ ಛಾವಣಿಗೆ ಆಲ್ಫೋನ್ಸ್‌ನ ಜಾಗದಲ್ಲಿರುವ ಮರದ ಕೊಂಬೆಗಳು ಬೀಳುವ ಬಗ್ಗೆ ತಕರಾರು ಇತ್ತು. ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸುವ ಸಲುವಾಗಿ 2020ರ ಎ.29ರಂದು ಮುಖಾಮುಖಿಯಾಗಿದ್ದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಆಲ್ಫೋನ್ಸ್ ಮರದ ಕೊಂಬೆ ಗಳನ್ನು ತೆಗೆಯುವುದಿಲ್ಲ, ನೀನು ಏನು ಬೇಕಾದರೂ ಮಾಡು ಎಂದು ಸವಾಲು ಹಾಕಿದ್ದಲ್ಲದೆ ಚೂರಿಯಿಂದ ವಿನ್ಸೆಂಟ್ ಡಿಸೋಜಗೆ ತಿವಿದಿದ್ದ. ಅದನ್ನು ಗಮನಿಸಿದ ವಿನ್ಸೆಂಟ್ ಡಿಸೋಜರ ಪತ್ನಿ ಹೆಲೆನ್ ಡಿಸೋಜ (43) ಪತಿಯ ರಕ್ಷಣೆಗೆ ಧಾವಿಸಿದಾಗ ಆಕೆಗೂ ಅಲ್ಫೋನ್ಸ್ ಸಲ್ದಾನ ಚೂರಿಯಿಂದ ತಿವಿದಿದ್ದ. ಆವಾಗ ರಕ್ಷಿಸಲು ಹೋದ ಮತ್ತೊಬ್ಬ ಮಹಿಳೆಗೂ ಬೆದರಿಕೆ ಹಾಕಿದ್ದ.

ಚೂರಿ ಇರಿತದಿಂದ ಗಂಭೀರ ಗಾಯಗೊಂಡ ವಿನ್ಸೆಂಟ್ ಡಿಸೋಜ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಂಭೀರ ಗಾಯ ಗೊಂಡಿದ್ದ ಹೆಲೆನ್ ಡಿಸೋಜ ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ ಆಗಿನ ಇನ್‌ಸ್ಪೆಕ್ಟರ್ ಜಯರಾಮ ಡಿ. ಗೌಡ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು 24 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ 46 ದಾಖಲೆಗಳನ್ನು ಗುರುತಿಸಿದ್ದರು. ಬಳಿಕ ಈ ಪ್ರಕರಣ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ/ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಅಲ್ಲಿನ ನ್ಯಾಯಾಧೀಶ ಜಗದೀಶ ವಿ.ಎನ್. ವಾದ ಆಲಿಸಿ ಆರೋಪಿ ಆಲ್ಫೋನ್ಸ್ ಸಲ್ದಾನನ ವಿರುದ್ಧ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು, ಭಾ.ದಂ.ಸಂ. ಕಲಂ. 506, 341, 302ರಡಿ ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಅಭಿಯೋಜಕಿ ಜುಡಿತ್ ಒಲ್ಲಾ ಮಾರ್ಗರೇಟ್ ಕ್ರಾಸ್ತಾ ಸಾಕ್ಷಿ ವಾದ ಮಂಡಿಸಿದ್ದರು.

*ದಂಪತಿಯ ಕೊಲೆಯಿಂದ ಅವರ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಘಟನೆ ವೇಳೆ ದಂಪತಿಯ ಪುತ್ರಿ 10ನೇ ತರಗತಿ ಮತ್ತು ಪುತ್ರ 5ನೇ ತರಗತಿಯಲ್ಲಿ ಕಲಿಯುತ್ತಿದ್ದರು. ಮೃತಪಟ್ಟ ಮಹಿಳೆಯ ಸಹೋದರಿ ಮಕ್ಕಳನ್ನು ಇದೀಗ ನೋಡಿಕೊಳ್ಳುತ್ತಿದ್ದು, ಆಕೆಗೂ ಯಾವುದೇ ಆದಾಯದ ಮೂಲವಿಲ್ಲ. ಹಾಗಾಗಿ ಮಕ್ಕಳಿಗೆ ಹೆಚ್ಚಿನ ಪರಿಹಾರ ಮೊತ್ತ ವನ್ನು ನೀಡಬೇಕು ಎಂದು ನ್ಯಾಯಾಲಯಕ್ಕೆ ಸರಕಾರಿ ಅಭಿಯೋಜಕರು ಮನವರಿಕೆ ಮಾಡಿದ್ದಾರೆ.

*ಪ್ರಕರಣದ ವಿಚಾರಣೆಗೆ ವೇಳೆ ಆಲ್ಫೋನ್ಸ್ ಸಲ್ದಾನಾ ತಾನು ಮಾನಸಿಕ ಅಸ್ವಸ್ಥ ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದ. 2000- 2002ರಲ್ಲಿ ಮುಂಬೈಯಲ್ಲಿ ಚಿಕಿತ್ಸೆ ಪಡೆದಿರುವ ಬಗ್ಗೆ ಹಳೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ. ಆದರೆ ನ್ಯಾಯಾಧೀಶರು ಅರ್ಜಿಯನ್ನು ವಜಾ ಮಾಡಿದ್ದರು. ಪುನಃ ಹೈಕೋರ್ಟ್‌ನಲ್ಲೂ ಎರಡು ವರ್ಷಗಳ ಕಾಲ ವಿಚಾರಣೆ ನಡೆದಿತ್ತು. ಅಲ್ಲೂ ಅರ್ಜಿ ವಜಾ ಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News