ಉರ್ವಸ್ಟೋರ್ ರಸ್ತೆ ದುರಸ್ಥಿಗೆ ಆಗ್ರಹಿಸಿ ಡಿವೈಎಫ್‌ಐ ಪ್ರತಿಭಟನೆ
ಮಂಗಳೂರು, ಆ.31: ನಗರದ ಉರ್ವಸ್ಟೋರ್-ಕೋಡಿಕಲ್-ಸುಂಕದಕಟ್ಟೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿ ರವಿವಾರ ಉರ್ವಸ್ಟೋರಿನಲ್ಲಿ ಡಿವೈಎಫ್‌ಐ ಉರ್ವಸ್ಟೋರ್ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ, ನಗರದ ಹಲವೆಡೆ ರಸ್ತೆಗಳು ಹೊಂಡಮಯವಾಗಿದೆ. ರಸ್ತೆ ಗುಂಡಿಗಳಿಗೆ ಬಿದ್ದು ಜನರು ಸಾವು, ನೋವು ಅನುಭವಿಸುತ್ತಿದ್ದಾರೆ. ನಗರ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಆರೋಪಿಸಿದರು.
ಕಟ್ಟಡ ಕಾರ್ಮಿಕರ ಸಂಘದ ಮುಖಂಡರಾದ ಮನೋಜ್ ಕುಲಾಲ್, ಪ್ರಕಾಶ್, ಉಮಾಶಂಕರ್, ರಿಕ್ಷಾ ಚಾಲಕರ ಸಂಘದ ಮುಖಂಡ ಇಕ್ಬಾಲ್, ದಲಿತ ಹಕ್ಕುಗಳ ಸಮಿತಿಯ ಮುಖಂಡ ರಘುವೀರ್, ಡಿವೈಎಫ್‌ಐ ಮುಖಂಡರಾದ ರಾಜೇಶ್ ಕುಲಾಲ್, ಪುನೀತ್ ಸುಧಾಕರ್, ಸುಕೇಶ್, ಪ್ರದೀಪ್ ಕುಲಾಲ್, ಪ್ರಶಾಂತ್ ಆಚಾರ್ಯ, ಪ್ರಶಾಂತ್ ಎಂ.ಬಿ, ನಿತ್ಯಾನಂದ, ಕಿಶೋರ್, ಸನತ್ ಉಪಸ್ಥಿತರಿದ್ದರು.