ಶಿಕ್ಷಣವೇ ಶೋಷಿತ ಸಮುದಾಯದ ಮೊದಲ ಶಕ್ತಿ: ಡಾ. ಬಿ.ಎ ವಿವೇಕ ರೈ
ಮಂಗಳೂರು, ಫೆ.4: ಶಿಕ್ಷಣವೇ ಶೋಷಿತ ಸಮುದಾಯದ ಮೊದಲ ಶಕ್ತಿಯಾಗಿದ್ದು, ಈ ನಿಟ್ಟಿನಲ್ಲಿ ಡಾ.ಅಂಬೇಡ್ಕರ್ ನಮಗೆ ಮಾದರಿಯಾಗುತ್ತಾರೆ. ಈ ಹಾದಿಯಲ್ಲೇ ಡಾ.ಅಭಯ ಕುಮಾರ್ ಸಾಗಿ ಬೆಳೆದಿದ್ದಾರೆ ಎಂದು ಡಾ.ಬಿ. ಎ.ವಿವೇಕ ರೈ ತಿಳಿಸಿದ್ದಾರೆ.
ನಗರದ ಬಲ್ಮಠ ಸಹೋದಯ ಸಭಾಂಗ ಣದಲ್ಲಿಂದು ಬಹು ಓದುಗ ಬಳಗದ ವತಿಯಿಂದ ರವಿವಾರ ಹಮ್ಮಿಕೊಂಡ ಡಾ.ಅಭಯ ಕುಮಾರ್ ಕೌಕ್ರಾಡಿ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ಮಂಗಳೂರಿನಲ್ಲಿ ಕುದ್ಮುಲ್ ರಂಗರಾವ್ ಅವರು, ದಲಿತರಿಗೆ ಶಿಕ್ಷಣ ಮೊದಲು ಸಿಗಬೇಕು. ಜೊತೆಗೆ ವಸತಿಯೂ ಅಗತ್ಯ ಎಂದು ದಲಿತರು, ಹಿಂದುಳಿದ ಜಾತಿಯವರಿಗಾಗಿ ಹಾಸ್ಟೆಲ್ ಆರಂಭಿಸಿದರು. ಶಿಕ್ಷಣ ದಲಿತ ಸಮುದಾಯದಲ್ಲಿ ಆತ್ಮ ವಿಶ್ವಾಸಕ್ಕೆ ಕಾರಣವಾಗಿದೆ. 20ನೇ ಶತಮಾನದಲ್ಲಿ ಜ್ಞಾನ ಶಕ್ತಿಗೆ ಪ್ರಥಮ ಸ್ಥಾನ. ಜ್ಞಾನಶಕ್ತಿ ಜಗತ್ತನ್ನು ಆಳುತ್ತದೆ. ಡಾ.ಆಭಯ ಕುಮಾರ್ ಈ ರೀತಿಯ ಜ್ಞಾನ ಶಕ್ತಿಯಿಂದ ಬೆಳೆದವರು. ನಮ್ಮ ಬದುಕಿನಲ್ಲಿ ನಾವು ಆಡುವ ಮಾತುಗಳ ಜೊತೆ ನಾವು ಮಾಡುವ ಕೆಲಸಗಳು ಮುಖ್ಯ ವಾಗುತ್ತದೆ.ಅಭಯ ಕುಮಾರ್ ತಮ್ಮ ಜ್ಞಾನದ ಜೊತೆ ಮಾನವೀಯತೆಯನ್ನು ಮೈಗೂಡಿಸಿ ಕೊಂಡಿದ್ದರು ಎಂದು ವಿವೇಕ ರೈ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಭಯ ಕುಮಾರ್,"ನಾನು ನನ್ನ ವೃತ್ತಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಮಾಣಿಕವಾಗಿ ತೊಡಗಿಸಿ ಕೊಂಡವನು.ನನ್ನ ಬರವಣಿಗೆ ಕೆಲಸಗಳಿಗೆ ನನ್ನ ಗುರುಗಳು ನನಗೆ ಪ್ರೇರಣೆ. ನನ್ನ ಸಮುದಾಯದಲ್ಲಿ ಮೊದಲು ಪಿ ಎಚ್ ಡಿ ಮಾಡಿದವನು ನಾನು. ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದಾಗ ನಾನು ತಲೆಯ ಮೇಲೆ ಹಾರುತ್ತಿದ್ದ ವಿಮಾನವನ್ನು ನೋಡುತ್ತಿದ್ದೆ. ಅಂತಹ ವಿಮಾನದಲ್ಲಿ ಲಂಡನ್ ಗೆ ಓದಲು ಹೋಗುವ ಕನಸು ನಾನು ಕಂಡವನಲ್ಲ. ನನ್ನ ಜೊತೆ ಇರುವವರಿಗೆ ನನ್ನಿಂದ ಸಾಧ್ಯವಾಗುವ ಸಹಾಯ ಮಾಡುತ್ತಾ ಬದುಕಿದ್ದೇನೆ. ಅದು ನನಗೆ ಸಮಾಜದಲ್ಲಿ ಗೌರವ ತಂದು ಕೊಟ್ಟಿದೆ. ಅದೇ ನನ್ನ ಸಂಪತ್ತು. ನನ್ನ ಬಗ್ಗೆ ಅಭಿನಂದನಾ ಕೃತಿ ರಚನೆ ಮಾಡಿದವರಿಗೆ ಕೃತಜ್ಞತೆ ಗಳನ್ನು ಸಲ್ಲಿಸುತ್ತೇನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಪೂವಪ್ಪ ಕಣಿಯೂರು ಮಾತನಾಡುತ್ತಾ, ಅಭಯ ಕುಮಾರ್ ಸದಾ ಕ್ರೀಯಾಶೀಲ ವ್ಯಕ್ತಿಯಾಗಿದ್ದರು. ತನ್ನ ಜೊತೆ ತನ್ನಂತೆ ಇರುವ ಇತರರಿಗೂ ತನ್ನಿಂದ ಆಗುವ ಸಹಾಯ ಮಾಡುತ್ತಾ ಬದುಕಿದವರು ಎಂದರು.
ಕೃತಿ ಪರಿಚಯ ಮಾಡಿದ ಡಾ.ಸುಧಾರಾಣಿ ಮಾತನಾಡುತ್ತಾ, ಈ ಕೃತಿ ಅಭಯ ಅವರ ಬದುಕಿನ ವಿವಿಧ ಮುಖಗಳನ್ನು ಅನಾವರಣಗೊಳಿಸಿದೆ ಎಂದರು.
ಸಮಾರಂಭದಲ್ಲಿ ಡಾ.ಆಶಾಲತಾ ಚೇವಾರ್, ಆಕೃತಿ ಪ್ರಕಾಶನದ ಮಾಲಕರಾದ ನಾಗೇಶ್ ಕಲ್ಲೂರು, ಡಾ.ಲತಾ ಅಭಯ ಕುಮಾರ್ ಉಪಸ್ಥಿತರಿದ್ದರು.
ಡಾ.ಗಿರಿಯಪ್ಪ ವಂದಿಸಿದರು.ಸೋಮಶೇಖರ್ ಕಾರ್ಯಕ್ರಮ ನಿರೂಪಿಸಿದರು.