×
Ad

ಇಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ದೋಷ: ದ.ಕ. ಗ್ರಾಹಕ ನ್ಯಾಯಾಲಯದಿಂದ ಓಲಾ ಕಂಪೆನಿಗೆ ದಂಡ

Update: 2025-09-22 18:56 IST

ಮಂಗಳೂರು, ಸೆ.22: ಸೇವಾ ನ್ಯೂನತೆ ಎಸಗಿತ ಮತ್ತು ದೋಷಯುಕ್ತ ಉತ್ಪನ್ನವನ್ನು ಮಾರಾಟ ಮಾಡಿದ ಆರೋಪದಲ್ಲಿ ಓಲಾ ಇಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ದ.ಕ. ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ.

ನಗರದ ಸರಕಾರಿ ಸ್ವಾಮ್ಯದ ಕಂಪೆನಿಯೊಂದರ ಉದ್ಯೋಗಿ ಉದಯ ಕುಮಾರ್ ಬಿ.ಸಿ. ಎಂಬವರು ಓಲಾ ಇಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಟ್‌ನಿಂದ 1.17 ಲಕ್ಷ ರೂ. ಪಾವತಿಸಿ ಓಲಾ ಸ್ಕೂಟರ್ ಖರೀದಿಸಿದ್ದರು. ಒಂದು ತಿಂಗಳಲ್ಲೇ ಸ್ಕೂಟರ್ ರಸ್ತೆ ಮಧ್ಯದಲ್ಲಿ ಹಠಾತ್ತಾಗಿ ನಿಲ್ಲಲಾರಂಭಿಸಿತ್ತು. ಈ ಬಗ್ಗೆ ಅವರು ಕಂಪೆನಿಗೆ ದೂರು ನೀಡಿದಾಗ ಮೊದಲ ಸಲ ಓಲಾ ಸಂಸ್ಥೆಯೇ ವಾಹನದ ದುರಸ್ತಿ ಮಾಡಿತ್ತು. ಆದರೆ ಸ್ಕೂಟರ್‌ನಲ್ಲಿ ಈ ಸಮಸ್ಯೆ ಪದೇಪದೇ ಕಾಣಿಸಿಕೊಳ್ಳುತ್ತಿತ್ತು. ರಿಪೇರಿ ನೆಪದಲ್ಲಿ ಓಲಾ ಸಂಸ್ಥೆ ಸ್ಕೂಟರ್‌ನ್ನು ತನ್ನ ಬಳಿ ಇರಿಸಿತ್ತು. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫಲವಾಗಿತ್ತು ಎನ್ನಲಾಗಿದೆ. ಹಾಗಾಗಿ ಉದಯ ಕುಮಾರ್ ಓಲಾ ಸಂಸ್ಥೆಗೆ ಲೀಗಲ್ ನೋಟಿಸ್ ಜಾರಿಗೊಳಿಸಿದ್ದರು. ಬಳಿಕ ಗ್ರಾಹಕರ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ಉದಯ್ ಕುಮಾರ್ ಸಲ್ಲಿಸಿದ ದೂರನ್ನು ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯವು ಓಲಾ ಸಂಸ್ಥೆ ಸೇವಾ ನ್ಯೂನತೆ ತೋರಿದೆ ಮತ್ತು ದೋಷಯುಕ್ತ ಉತ್ಪನ್ನವನ್ನು ಮಾರಾಟ ಮಾಡಿದೆ ಎಂದು ತೀರ್ಪು ನೀಡಿದೆ. ಪ್ರಮಾದ ಎಸಗಿದ ಓಲಾ ಕಂಪೆನಿ 45 ದಿನಗಳಲ್ಲಿ ಸ್ಕೂಟರನ್ನು ಸಂಚಾರ ಯೋಗ್ಯವಾಗಿ ರಿಪೇರಿ ಮಾಡಿಕೊಡಬೇಕು. ತಪ್ಪಿದ್ದಲ್ಲಿ 45 ದಿನದೊಳಗೆ ಶೇ.6ರ ಬಡ್ಡಿಯೊಂದಿಗೆ 1.17 ಲಕ್ಷ ರೂ. ಪಾವತಿಸಲು ಆದೇಶ ನೀಡಿದೆ. ಅಲ್ಲದೆ ಸೇವಾ ನ್ಯೂನತೆಗಾಗಿ 10,000 ರೂ.ದಂಡ ಹಾಗೂ ಪ್ರಕರಣದ ವೆಚ್ಚವಾಗಿ 5,000 ರೂ.ವನ್ನು 45 ದಿನದೊಳಗೆ ಪಾವತಿಸುವಂತೆ ಆದೇಶದಲ್ಲಿ ತಿಳಿಸಿದೆ. ಗ್ರಾಹಕರ ಪರವಾಗಿ ಮಂಗಳೂರಿನ ವಕೀಲ ತೇಜಕುಮಾರ್ ಡಿ.ಎಂ. ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News