ಮಂಗಳೂರು| ಜೋಡಿಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಸದಸ್ಯ ಸೆರೆ
29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ
ಮಂಗಳೂರು: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 29 ವರ್ಷದ ಹಿಂದೆ ನಡೆದಿದ್ದ ಜೋಡಿಕೊಲೆ ಪ್ರಕರಣದ ಆರೋಪಿ, ದಂಡುಪಾಳ್ಯ ಗ್ಯಾಂಗ್‌ನ ಸದಸ್ಯ ಚಿಕ್ಕ ಹನುಮ ಯಾನೆ ಚಿಕ್ಕ ಹನುಮಂತಪ್ಪ ಯಾನೆ ಕೆ. ಕೃಷ್ಣಪ್ಪ ಯಾನೆ ಕೃಷ್ಣ ಎಂಬಾತನನ್ನು ಉರ್ವ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ.
ದಂಡುಪಾಳ್ಯ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದಿದ್ದ ಈ ಗ್ಯಾಂಗ್‌ನ ಸದಸ್ಯನಾಗಿದ್ದ ಮೂಲತಃ ಬೆಂಗಳೂರಿನ ಹೊಸಕೋಟೆ ತಾಲೂಕಿನ ಪ್ರಸಕ್ತ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ವಿಜಯನಗರ ಕಾಲನಿಯ ಮದನಪಳ್ಳೆ ಎಂಬಲ್ಲಿನ ನಿವಾಸಿಯಾಗಿದ್ದ ಈತನ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಂಧಿಸಿದರು. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನವಾಗಿದೆ.
*1997ರ ಅಕ್ಟೋಬರ್ 11ರಂದು ಮಧ್ಯರಾತ್ರಿ ಉರ್ವ ಮಾರಿಗುಡಿ ಕ್ರಾಸ್ ಬಳಿಯ ಮನೆಗೆ ನುಗ್ಗಿದ ದಂಡುಪಾಳ್ಯ ಗ್ಯಾಂಗ್‌ನ ದೊಡ್ಡ ಹನುಮ ಯಾನೆ ದೊಡ್ಡ ಹನುಮ, ವೆಂಕಟೇಶ ಯಾನೆ ಚಂದ್ರ, ಮುನಿಕೃಷ್ಣ ಯಾನೆ ಕೃಷ್ಣ, ನಲ್ಲತಿಮ್ಮ ಯಾನೆ ತಿಮ್ಮ, ಕೃಷ್ಣ ಯಾನೆ ದಂಡುಪಾಳ್ಯ ಕೃಷ್ಣ ಯಾನೆ ನಾಗರಾಜ, ಚಿಕ್ಕ ಹನುಮ, ಕೃಷ್ಣಾಡು ಯಾನೆ ಕೃಷ್ಣ, ವೆಂಕಟೇಶ್ ಯಾನೆ ರಮೇಶ್ ಎಂಬವರು ಮನೆಯಲ್ಲಿದ್ದ 80ರ ಹರೆಯದ ಲೂವಿಸ್ ಡಿಮೆಲ್ಲೋ ಹಾಗೂ 19ರ ಹರೆಯದ ರಂಜಿತ್ ವೇಗಸ್‌ರನ್ನು ಕೊಲೆ ಮಾಡಿ ಚಿನ್ನಾಭರಣಗಳ್ನು ದೊಚಿಕೊಂಡು ಪರಾರಿಯಾಗಿದ್ದರು.
ಈ ಪ್ರಕರಣದ ಆರೋಪಿ ಚಿಕ್ಕ ಹನುಮ ಯಾನೆ ಚಿಕ್ಕ ಹನುಮಂತಪ್ಪಯಾನೆ ಕೆ. ಕೃಷ್ಣಪ್ಪಯಾನೆ ಕೃಷ್ಣ ತನ್ನ ಬುದ್ಧಿವಂತಿಕೆಯನ್ನು ಬಳಸಿ ಚಿಕ್ಕ ಹನುಮಂತಪ್ಪ ಯಾನೆ ಕೆ. ಕೃಷ್ಣಪ್ಪಯಾನೆ ಕೃಷ್ಣ ಎಂದು ಹೆಸರು ಬದಲಾಯಿಸಿ ಕೊಂಡು ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಮಂಗಳೂರು ಜೆಎಂಎಫ್‌ಸಿ 2ನೇ ನ್ಯಾಯಾಲಯವು 2010ರಲ್ಲಿ ವಾರೆಂಟ್ ಹೊರಡಿಸಿತ್ತು. ಈತನ ವಿರುದ್ಧ ರಾಜ್ಯದಲ್ಲಿ ಸುಮಾರು 13 ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿತ್ತು.
ಆರೋಪಿಯ ಪತ್ತೆ ಕಾರ್ಯದಲ್ಲಿ ಉರ್ವ ಠಾಣೆಯ ನಿರೀಕ್ಷಕ ಶ್ಯಾಮ್ ಸುಂದರ್ ಎಚ್.ಎಂ, ಎಸ್ಸೈಗಳಾದ ಗುರಪ್ಪಕಾಂತಿ, ಎಲ್. ಮಂಜುಳಾ, ಎಎಸ್ಸೈ ವಿನಯ ಕುಮಾರ್ ಮತ್ತು ಸಿಬ್ಬಂದಿಗಳಾದ ಲಲಿತಲಕ್ಷ್ಮಿ, ಅನಿಲ್, ಪ್ರಮೋದ್, ಆತ್ನಾನಂದ, ಹರೀಶ್ ಪಾಲ್ಗೊಂಡಿದ್ದರು.
ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ಬಹುಮಾನಕ್ಕಾಗಿ ರಾಜ್ಯದ ಡಿಜಿಐಜಿಪಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.