ನಕಲಿ ಚಿನ್ನ ಅಡವಿಟ್ಟು ಸಹಕಾರಿ ಸಂಸ್ಥೆಯಿಂದ ಸಾಲ: ಪ್ರಕರಣ ದಾಖಲು
ಮಂಗಳೂರು, ಜ.22: ಕಾವೂರಿನ ಸಹಕಾರಿ ಸಂಸ್ಥೆಯೊಂದರಲ್ಲಿ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು 14.89 ಲಕ್ಷ ರೂ. ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ನಾಲ್ಕು ಮಂದಿಯ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಹಮ್ಮದ್ ನಝೀರ್, ಜಮಾಲುದ್ದೀನ್ ಎ.ಎಚ್, ದಿಲ್‌ಶಾದ್, ಸೈನಾಝ್ ನಕಲಿ ಚಿನ್ನ ಅಡವಿಟ್ಟು ವಂಚನೆ ಮಾಡಿದ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಹಮ್ಮದ್ ನಝೀರ್ 8,99,000 ರೂ., ದಿಲ್‌ಶಾದ್ 2,40,000 ರೂ., ಜಮಾಲುದ್ದೀನ್ 3,50,000 ರೂ. ಸಾಲ ಪಡೆದಿದ್ದರು. ಅಡವಿಟ್ಟ ಈ ಚಿನ್ನವನ್ನು ವಾರ್ಷಿಕವಾಗಿ ತಪಾಸಣೆ ಮಾಡಿದಾಗ ಅಡವಿಟ್ಟ ಬಳೆಗಳೆಲ್ಲವೂ ನಕಲಿ ಎಂದು ತಿಳಿದು ಬಂದಿದೆ. ಅದಾದ ಬಳಿಕ ಸೈನಾಝ್ ಎಂಬಾಕೆ 5 ಚಿನ್ನದ ಬಳೆಗಳನ್ನು ತಂದು ಅಡವಿರಿಸಿ ಹಣ ನೀಡುವಂತೆ ಕೇಳಿದ್ದು, ಪರಿವೀಕ್ಷಕರು ಅದನ್ನು ತಪಾಸಣೆ ಮಾಡಿದಾಗ ನಕಲಿ ಎಂದು ತಿಳಿದು ಬಂದಿದೆ. ಆಕೆಯನ್ನು ವಿಚಾರಿಸಿದಾಗ ಅಣ್ಣ ಮುಹಮ್ಮದ್ ನಝೀರ್ ತನಗೆ ಬಳೆಗಳನ್ನು ಕೊಟ್ಟು ಅಡವಿಟ್ಟು ಹಣ ತರುವಂತೆ ಕಳುಹಿಸಿರುವುದಾಗಿ ತಿಳಿಸಿದ್ದಳು ಎನ್ನಲಾಗಿದೆ.
ಆರೋಪಿಗಳು ಜಾಲವೊಂದನ್ನು ರಚಿಸಿ ಮೋಸ ಮಾಡುವ ಉದ್ದೇಶದಿಂದ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ. ಪ್ರಕರಣದಲ್ಲಿ ಆರೋಪಿಗಳಾದ ಮುಹಮ್ಮದ್ ನಝೀರ್, ಜಮಾಲುದ್ದೀನ್ ಎ.ಎಚ್, ದಿಲ್‌ಶಾದ್ ಹಾಗೂ ನಕಲಿ ಚಿನ್ನವನ್ನು ಅಡಮಾನ ಇರಿಸಲು ಬಂದಿದ್ದ ಸೈನಾಝ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.