ಶೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ ವಂಚನೆ: ಪ್ರಕರಣ ದಾಖಲು
ಮಂಗಳೂರು, ಜ.19: ಶೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ 1,38,20,060 ರೂ. ವಂಚನೆ ಮಾಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.15ರಂದು ರಿಶಿತಾ ಎಂಬ ಹೆಸರಿನಲ್ಲಿ ತನಗೆ ಬಂದ ವಾಟ್ಸ್‌ಆ್ಯಪ್ ಮೆಸೇಜ್‌ನಲ್ಲಿ ಡೆಕೋರೇಟರ್ಸ್ ಐಟಂಗಳು ಬೇಕಾಗಿದೆ ಎಂದಿತ್ತು. ಅದರಂತೆ ತಾನು ಡೆಕೋರೇಟರ್ಸ್ ಐಟಂಗಳ ಫೋಟೋವನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದೆ. ಎರಡು ದಿನಗಳ ಬಳಿಕ ಆನ್‌ಲೈನ್ ಶೇರು ಮಾರುಕಟ್ಟೆಯ ಬಗ್ಗೆ ಮೆಸೇಜ್‌ಗಳು ಬಂದಿತ್ತು. ಅದರಿಂದ ಪ್ರೇರಿತನಾದ ತಾನು ಹಣ ಹೂಡಿಕೆಗೆ ಒಪ್ಪಿಗೆ ಸೂಚಿಸಿ ಲಿಂಕ್ ಅದುಮಿದ್ದೆ. ಹಾಗೇ ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಡಿ.17ರಿಂದ ಜ.14ರವರೆಗೆ 1,38,20,060 ರೂ.ವನ್ನು ವರ್ಗಾವಣೆ ಮಾಡಿದ್ದೇನೆ. ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶ ವಿತ್‌ಡ್ರಾ ಮಾಡಲು ಕೇಳಿದಾಗ ಅಪರಿಚಿತ ವ್ಯಕ್ತಿಗಳು ವಿತ್ ಡ್ರಾ ಮಾಡಲು ಸರ್ವೀಸ್ ಟ್ಯಾಕ್ಸ್ ಪಾವತಿಸುವಂತೆ ಒತ್ತಾಯಿಸಿದರು. ಆವಾಗ ತಾನು ಮೋಸ ಹೋಗಿರುವುದು ತಿಳಿಯಿತು ಎಂದು ವಂಚನೆಗೊಳಗಾದ ವ್ಯಕ್ತಿ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.