×
Ad

ಸಾಮೂಹಿಕ ಅತ್ಯಾಚಾರ ಪ್ರಕರಣ: ಬಂಧಿತ ಮೂವರು ಆರೋಪಿಗಳು ಉಳ್ಳಾಲ ಪೊಲೀಸ್ ಕಸ್ಟಡಿಗೆ

Update: 2025-04-18 20:12 IST

ಉಳ್ಳಾಲ: ಪಶ್ಚಿಮ ಬಂಗಾಳ ಮೂಲದ ಯುವತಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಇಂದು ಸರಕಾರಿ ರಜಾ ದಿನದ ಕಾರಣ ಮ್ಯಾಜಿಸ್ಟ್ರೇಟ್ ಮನೆಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.

ಆರೋಪಿಗಳಾದ ಆಟೋ ರಿಕ್ಷಾ ಚಾಲಕ ಮುಲ್ಕಿ ಕಾರ್ನಾಡು ಲಿಂಗಪ್ಪಯ್ಯಕಾಡು ನಿವಾಸಿ ಪ್ರಭುರಾಜ್ (38), ಪೈಂಟರ್ ಕಮ್ ಎಲೆಕ್ಟ್ರೀಷಿಯನ್ ಕೆಲಸದ ಕುಂಪಲ, ಚಿತ್ರಾಂಜಲಿ ನಗರ ನಿವಾಸಿ ಮಿಥುನ್ (37), ಡೆಲಿವರಿ ಬಾಯ್ ಆಗಿರುವ ಪಡೀಲ್ ಕೊಡಕ್ಕಲ್ ನಿವಾಸಿ ಮನೀಶ್ (30) ಎಂಬವರನ್ನು ಶುಕ್ರವಾರದಂದು ಉಳ್ಳಾಲ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಗಾಗಿ ಕಸ್ಟಡಿಗೆ ತೆಗೆದಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಯುವತಿಗೆ ಕೆಲಸ ಕೊಡಿಸುವ ಅಮಿಷವೊಡ್ಡಿ, ಆಕೆಗೆ ಮದ್ಯ ಕುಡಿಸಿ ಕುತ್ತಾರು ರಾಣಿಪುರ ಬಳಿಯ ನದಿ ತೀರದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.

ಉಳ್ಳಾಲ ಪೊಲೀಸರು ಕಸ್ಟಡಿಯಲ್ಲಿರುವ ಆರೋಪಿಗಳನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಿ ಶನಿವಾರ ಸ್ಥಳ ಮಹಜರು ನಡೆಸುವ ಸಾಧ್ಯತೆಗಳಿವೆ. ಸಂತ್ರಸ್ತ ಯುವತಿಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯ ಸಹೋದರಿ ರಿಕ್ಷಾ ಚಾಲಕನಿಗೆ 2,000 ರೂ. ಗೂಗಲ್‌ ಪೇ ಮಾಡಿ, ಆಕೆಯನ್ನು ಸುರಕ್ಷಿತವಾಗಿ ರೈಲು ಹತ್ತಿಸುವಂತೆ ರಿಕ್ಷಾ ಚಾಲಕನಲ್ಲಿ ಕೇಳಿಕೊಂಡಿದ್ದಳು ಎನ್ನಲಾಗಿದ್ದು, ರಿಕ್ಷಾ ಚಾಲಕ ಆರೋಪಿ ಅದನ್ನೇ ದುರ್ಬಳಕೆ ಮಾಡಿ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆ ಯುವತಿ ನಾಲ್ಕು ತಿಂಗಳುಗಳ ಹಿಂದೆ ತನ್ನ ಪ್ರಿಯತಮನ ಜೊತೆ ಕೇರಳ ಕಡೆಗೆ ಕೆಲಸಕ್ಕೆ ಬಂದಿದ್ದರು. ಎ.17 ರಂದು ಇಬ್ಬರ ನಡುವೆ ಜಗಳ ನಡೆದಿದ್ದು, ಆತ ಯುವತಿಯ ಮೊಬೈಲನ್ನು ಒಡೆದು ಹಾಕಿ ಮನೆಯಿಂದ ಹೊರಹಾಕಿದ್ದ. ಇದರಿಂದ ನೊಂದ ಯುವತಿ ಕೇರಳದಿಂದ ಮಂಗಳೂರಿಗೆ ಬರುವ ರೈಲು ಹತ್ತಿದ್ದಳು. ಮಂಗಳೂರಿನಲ್ಲಿ ಇಳಿದಾಕೆ ಊರಿಗೆ ಹೋಗಲು ಹಣವಿಲ್ಲದೇ ಅಸಹಾಯಕಳಾಗಿ ಇದ್ದು, ರಿಕ್ಷಾ ಚಾಲಕ ಪ್ರಭುರಾಜ್‌ ಜೊತೆಗೆ ಸಹಾಯ ಯಾಚಿಸಿದ್ದಳು. ಅದನ್ನೇ ದುರ್ಬಳಕೆ ಮಾಡಿಕೊಂಡ ಆರೋಪಿ ಆಕೆಯ ಮೊಬೈಲ್‌ ರಿಪೇರಿ ನಡೆಸಿದ ನಂತರ ಪಶ್ಚಿಮ ಬಂಗಾಳದಲ್ಲಿರುವ ಆಕೆಯ ಸಹೋದರಿಗೆ ಕರೆ ಮಾಡುವಂತೆ ಸೂಚಿಸಿದ್ದು, ನೊಂದ ಯುವತಿ ಸಹೋದರಿಗೆ ಕರೆ ಮಾಡಿ ಊರಿಗೆ ಬರುವ ಇಂಗಿತವನ್ನು ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಸಹೋದರಿ ರಿಕ್ಷಾ ಚಾಲಕನಲ್ಲಿ ಸಹಾಯ ಯಾಚಿಸಿ ಆತನಿಗೆ 2000 ರೂ. ಗೂಗಲ್‌ ಪೇ ಮಾಡಿ, ರೈಲು ಹತ್ತಿಸುವಂತೆ ಭಿನ್ನವಿಸಿಕೊಂಡಿದ್ದಳು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News