ಆ.31ರಂದು ತುಳುಭವನದಲ್ಲಿ ಸುವರ್ಣ ಸ್ಮರಣೆ
ಮಂಗಳೂರು, ಆ. 28: ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ದಿ. ಸದಾನಂದ ಸುವರ್ಣ ಸ್ಮರಣೆಯಲ್ಲಿ ಆ. 31ರಂದು ತುಳುಭವನದಲ್ಲಿ ಒಂದು ದಿನದ ಕಾರ್ಯ್ರಮ ಆಯೋಜಿಸಲಾಗಿದೆ ಎಂದು ರಂಗಕರ್ಮಿ ಚಂದ್ರಹಾಸ ಉಳ್ಳಾಲ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದಿ. ಸದಾನಂದ ಸುವರ್ಣರು ತುಳು, ಕನ್ನಡ ರಂಗಭೂಮಿ, ಸಾಹಿತ್ಯ, ಚಲನ ಚಿತ್ರ, ಕಿರುತೆರೆ ಮಾಧ್ಯಮಗಳಲ್ಲಿ ಚಿರಸ್ಥಾಯಿಯಾದ ಹೆಸರು. 1977 ರಲ್ಲಿ ಅವರ ನಿರ್ಮಾಣದ ಘಟಶ್ರಾದ್ಧ ಸ್ವರ್ಣಕಮಲ ಪಡೆದರೆ, 1991ರಲ್ಲಿ ಅವರು ನಿರ್ಮಿಸಿ ನಿರ್ದೇಶಿಸಿದ ದೂರದರ್ಶನ ಸರಣಿ ಗುಡ್ಡದ ಭೂತ
ಕರ್ನಾಟಕದ ಜನಮನಕ್ಕೆ ಲಗ್ಗೆ ಇಡುವುದರ ಜೊತೆ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಇವಲ್ಲದೆ ಅವರು ರಾಜ್ಯ ಪ್ರಶಸ್ತಿ ವಿಜೇತ ಕುಬಿ ಮತ್ತು ಇಯಾಲ ಚಲನಚಿತ್ರವನ್ನೂ ಕಾರಂತ ದರ್ಶನವೆನ್ನುವ ಸರಣಿ ಹಾಗೂ ಶ್ರೀ ನಾರಾಯಣ ಗುರುಗಳ ಬಗ್ಗೆ ಸಾಕ್ಷಚಿತ್ರವೊಂದನ್ನೂ ನಿರ್ದೇಶಿಸಿದ್ದಾರೆ. 1997ರ ನಂತರ ಮುಂಬೈ ತೊರೆದು ಮಂಗಳೂರಲ್ಲಿ ನಲೆಸಿದ ಅವರು ಇಲ್ಲಿ ನಿರ್ದೇಶಿಸಿದ ಉರುಳು, ಕೋರ್ಟ್ ಮಾರ್ಷಲ್, ಮಳೆ ನಿಲ್ಲುವವರೆಗೆ ನಾಟಕಗಳು ಬಹಳ ಪ್ರದರ್ಶನಗಳನ್ನು
ಕಂಡಿವೆ. ಕಲಂಕ್‌ದಿ ನೀರ್ ಎಂಬ ತುಳು ನಾಟಕವನ್ನೂ ಮಂಗಳೂರಲ್ಲಿ ಅವರು ನಿರ್ದೇಶಿಸಿದ್ದಾರೆ. ಹಾಗಾಗಿ ಸದಾನಂದ ಸುವರ್ಣರ ಸ್ಮರಣೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ನಟೇಶ್ ಉಳ್ಳಾಲ್ ಮಾತನಾಡಿ, ಆ ದಿನ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಅವರ ಸಿನಿಮಾ, ಸರಣಿಗಳು, ತುಳು ಕನ್ನಡ ರಂಗಭೂಮಿಗೆ ಅವರ ಕೊಡುಗೆಗಳ ಬಗ್ಗೆ ಉಪನ್ಯಾಸ, ಸಂವಾದ ಗೋಷ್ಠಿ ಮತ್ತು ಸಮಾರೋಪದಲ್ಲಿ ಸಂಜೆ 6.30ಕ್ಕೆ ಅವರು ನಿರ್ದೇಶಿಸಿದ ಕೋರ್ಟ್ ಮಾರ್ಷಲ್ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಕಾರ್ಯಕ್ರಮಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜರ್ನಿ ಥೇಟರ್‌ಗ್ರೂಪ್ (ರಿ) ಮಂಗಳೂರು, ಅಸ್ತಿತ್ವ (ರಿ)ಮಂಗಳೂರು, ಕಲಾಸಂಗಮ (ರಿ) ಮಂಗಳೂರು, ಸಂಕೇತ್ ಕಲಾವಿದರು (ರಿ) ಮಂಗಳೂರು, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಮಂಗಳೂರು, ಅರೆಹೊಳ ಪ್ರತಿಷ್ಠಾನ (ರಿ) ಮಂಗಳೂರು, ಸಮುದಾಯ ಮಂಗಳೂರು, ಆಯನ ನಾಟಕದ ಮನೆ ಮಂಗಳೂರು, ಭೂಮಿಕಾ (ರಿ) ಮಂಗಳೂರು ಮತ್ತು ಕಾರಂತೋತ್ಸವ ಸಮಿತಿ ಮುಂಬೈ ಸಹಯೋಗ ನೀಡುತ್ತಿವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಲಕ್ಷ್ಮಣ್ ಕುಮಾರ್ ಮಲ್ಲೂರು, ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.