ಮೂಲಭೂತ ಸೌಲಭ್ಯ ಅಭಿವೃದ್ಧಿಗಾಗಿ ಮೀಫ್ ಗೆ ಸರಕಾರ ನೂರು ಕೋಟಿ ಅನುದಾನ ನೀಡಲಿ: ಸಯ್ಯದ್ ಬ್ಯಾರಿ ಆಗ್ರಹ
ಮಂಗಳೂರು: ಮೀಫ್‌ನ 175 ಶಾಲೆಗಳಲ್ಲಿ 100 ಶಾಲೆಗಳು ಕಷ್ಟದಲ್ಲಿವೆ. ಇದಕ್ಕೆ ಸರಕಾರದ ಸಹಾಯಹಸ್ತ ಅತ್ಯಗತ್ಯ. ಈ ಶಾಲೆಗಳಲ್ಲಿ 60,000 ಸಾವಿರ ಮಕ್ಕಳು ಮೀಫ್ ನ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. 6000 ಸಾವಿರ ಶಿಕ್ಷಕರು ಇದ್ದಾರೆ. ಇಷ್ಟು ದೊಡ್ಡ ವ್ಯವಸ್ಥೆಯನ್ನು ನಾವು ಸಜ್ಜುಗೊಳಿಸಿದ್ದೇವೆ. ಇದಕ್ಕೆ ಮೂಲಭೂತ ಸೌಲಭ್ಯ ಅಭಿವೃದ್ಧಿ ಪಡಿಸಲು 100 ಕೋಟಿ ರೂ. ಒನ್ ಟೈಮ್ ಗ್ರಾಂಟ್ ( ಒಂದು ಬಾರಿಯ ಅನುದಾನ) ನೀಡಿ ಸಹಕರಿಸುವಂತೆ ಮೀಫ್ ಗೌರವ ಸಲಹೆಗಾರ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರು ಸರಕಾರವನ್ನು ಆಗ್ರಹಿಸಿದರು. ಇದು ಮಾಜಿ ಉನ್ನತ ಶಿಕ್ಷಣ ಸಚಿವ ದಿವಂಗತ ಬಿ ಎ ಮೊಯ್ದಿನ್ ಅವರ ಕನಸೂ ಆಗಿತ್ತು ಎಂದವರು ಸಮಾರಂಭದಲ್ಲಿ ಉಪಸ್ಥಿತರಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಯ್ಯದ್ ಬ್ಯಾರಿ ಮನವಿ ಮಾಡಿದರು.
ಜೆಪ್ಪಿನಮೊಗರು ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಆಡಿಟೋರಿಯಂನಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಇದರ ವಾರ್ಷಿಕ ಸಮಾವೇಶ ಮತ್ತು ಎಕ್ಸಲೆನ್ಸ್ ಅವಾರ್ಡ್ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಮೀಫ್ ನ ಅಧ್ಯಕ್ಷ ಮೂಸಬ್ಬ ಬ್ಯಾರಿ ಹಾಗು ಅವರ ಇಡೀ ತಂಡ ಅದರ ಜೀವನಾಡಿಯಾಗಿ ಅದನ್ನು ಮುನ್ನಡೆಸುತ್ತಿದ್ದಾರೆ ಎಂದು ಪ್ರಶಂಸಿಸಿದ ಸಯ್ಯದ್ ಬ್ಯಾರಿ ಅವರು ಮೀಫ್ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಪಾತ್ರವನ್ನೂ ಶ್ಲಾಘಿಸಿದರು. ಇವತ್ತಿನ ಮಕ್ಕಳಿಗೆ ಚೆನ್ನಾಗಿ ಶಿಕ್ಷಣ ಕೊಡಲು ಅತ್ಯಂತ ಪರಿಣಾಮಕಾರಿಯಾಗಿ ಕ್ಲಾಸ್ ನಡೆಸಬೇಕಾಗುತ್ತದೆ. ಒಬ್ಬ ಉತ್ತಮ ಶಿಕ್ಷಕ ಎರಡು ಲಕ್ಷ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾರೆ. ಹಾಗಾಗಿ ಶಿಕ್ಷಕರ ಪಾತ್ರ ಎಲ್ಲರಿಗಿಂತ ಬಹಳ ಮುಖ್ಯ. ಮಕ್ಕಳು ಹಾಗು ಶಿಕ್ಷಕರ ನಡುವೆ ಸಮನ್ವಯ ಸಾಧಿಸುವುದು ಬಹಳ ಮುಖ್ಯ. ಹಾಗಾಗಿ ಶಿಕ್ಷಕರು ತಮ್ಮ ವೃತ್ತಿಯನ್ನು ಕೇವಲ ಉದ್ಯೋಗ ಎಂದು ನೋಡದೆ ಪುಣ್ಯ ಕೆಲಸವೆಂದು ಪರಿಗಣಿಸಿ ಮಾಡಬೇಕಾಗಿದೆ. ಅದೆಷ್ಟೇ ಕಷ್ಟ ನಷ್ಟವಿದ್ದರೂ ಶಿಕ್ಷಕರಿಗೆ ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಪೂರ್ಣ ಸಹಕಾರ ನೀಡಬೇಕು ಎಂದು ಸಯ್ಯದ್ ಬ್ಯಾರಿ ಅವರು ಕರೆ ನೀಡಿದರು.
ಕ್ಯಾಪ್ಟನ್ ಆಗಬೇಕಿದ್ದ ಖಾದರ್ ಗೆ ರೆಫರಿ ಸ್ಥಾನ ಕೊಟ್ಟಿದ್ದು ಬೇಸರ ತಂದಿದೆ : ಈ ಬಾರಿ ನಮ್ಮ ಸಮುದಾಯಕ್ಕೆ ಐದು ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ಎರಡು ಸಚಿವ ಸ್ಥಾನ ಹಾಗು ಸ್ಪೀಕರ್ ಸ್ಥಾನ ಸಿಕ್ಕಿದೆ. ಈ ಬಗ್ಗೆ ಮುಸಲ್ಮಾನರಿಗೆ ಒಂದು ಬೇಸರವಿದೆ. ಸ್ಪೀಕರ್ ಬದಲು ಖಾದರ್ ಅವರು ಯಾವುದಾದರೂ ಜನರಿಗೆ ಬಹಳ ಉಪಕರವಾಗುವ ಸಚಿವ ಸ್ಥಾನ ಸಿಕ್ಕಿದ್ದರೆ ಮುಸ್ಲಿಂ ಸಮುದಾಯಕ್ಕೆ ಹಾಗು ಈ ರಾಜ್ಯದ ಜನರಿಗೆ ಉಪಕರವಾಗುತ್ತಿತ್ತು. ಯು.ಟಿ. ಖಾದರ್ ಅವರಿಗೆ ಸ್ಪೀಕರ್ ಸ್ಥಾನ ಒಳ್ಳೆಯ ಉದ್ದೇಶಕ್ಕಾಗಿ ಕೊಟ್ಟಿದ್ದರೆ ನಮಗೆ ಬೇಜಾರಿಲ್ಲ. ಆದರೆ ಸಚಿವ ಸ್ಥಾನವನ್ನು ಕಿತ್ತುಕೊಂಡು ಅಲಂಕಾರಕ್ಕಾಗಿ ಸ್ಪೀಕರ್ ಸ್ಥಾನ ಕೊಟ್ಟಿದ್ದರೆ ಅದರ ಬಗ್ಗೆ ನೋವಿದೆ. ಬೆಸ್ಟ್ ಬ್ಯಾಟರ್, ಬೆಸ್ಟ್ ಬೌಲರ್ , ಬೆಸ್ಟ್ ಆಲ್‌ರೌಂಡರ್ ಆಗಿರುವ ಖಾದರ್ ಅವರನ್ನು ಕ್ಯಾಪ್ಟನ್ ಮಾಡುವ ಬದಲಿಗೆ ರೆಫರಿ ಮಾಡಲಾಗಿದೆ. ಈ ವಿಚಾರದಲ್ಲಿ ನಮಗೆ ನೋವಿದೆ, ಆದರೆ ಸ್ಪೀಕರ್ ಆಗಿಯೂ ಖಾದರ್ ಅವರು ತಮ್ಮ ಛಾಪು ಮೂಡಿಸಲಿದ್ದಾರೆ ಎಂದು ಸಯ್ಯದ್ ಬ್ಯಾರಿ ಹೇಳಿದರು.
ಮೀಫ್ ನ ಗೌರವಾಧ್ಯಕ್ಷ ಉಮರ್ ಟೀಕೆ ದಿಕ್ಚೂಚಿ ಭಾಷಣ ಮಾಡಿದರು.
ಬೆಂಗಳೂರು ಪ್ರೆಸಿಡೆನ್ಸಿ ವಿವಿ ಕುಲಪತಿ ಡಾ.ನಿಸ್ಸಾರ್ ಅಹ್ಮದ್, ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಂಸ್ಥೆಯ ಸ್ಥಾಪಕರು ಮತ್ತು ಆಡಳಿತ ನಿರ್ದೇಶಕ ಡಾ.ಯು.ಕೆ.ಮೋನು, ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ ಆ್ಯಂಡ್ ಪಿಯು ಕಾಲೇಜಿನ ಚೇರ್ಮನ್ ಹೈದರ್ ಅಲಿ ಕೆ, ನ್ಯಾಷನಲ್ ಟ್ರೈನರ್ ಪ್ರೊ. ರಾಜೇಂದ್ರ ಭಟ್ ಕಾರ್ಕಳ ಮುಖ್ಯ ಅತಿಥಿಯಾಗಿದ್ದರು.
ಮೀಫ್ ನ ಪ್ರಧಾನ ಕಾರ್ಯದರ್ಶಿ ಬಿ.ಎ.ನಝೀರ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್, ಶಬೀ ಅಹ್ಮದ್ ಖಾಝಿ , ಮುಸ್ತಫಾ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ 100 ಫಲಿತಾಂಶ ದಾಖಲಿಸಿರುವ ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಿಯಾಝ್ ಅಹ್ಮದ್ ಮೀಫ್ ವಾರ್ಷಿಕ ಪ್ರಶಸ್ತಿ ವಿಜೇತರ ವಿವರ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ಸ್ವಾಗತಿಸಿದರು, ಉಪಾಧ್ಯಕ್ಷ ಬಿ.ಎ. ಮುಮ್ತಾಝ್ ಅಲಿ ವಂದಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.