ವಾದ್ಯ ಕಲಾವಿದರಿಗೂ ಸರಕಾರ ಮಾಸಾಶನ ನೀಡಲಿ: ಗೋಕುಲ್‌ದಾಸ್ ಬಾರ್ಕೂರು
ಮಂಗಳೂರು, ನ.5: ರಾಜ್ಯಸರಕಾರ ನಾನಾ ಕಲಾವಿದರಿಗೆ ಮಾಸಾಶನ ನೀಡುವ ಮೂಲಕ ಅವರಿಗೆ ಆಸರೆಯಾಗಿದೆ. ಆದರೆ ವಾದ್ಯ ಕಲಾವಿದರಿಗೆ ಮಾಸಾಶನ ನೀಡುವ ಯೋಜನೆ ಆರಂಭಿಸಿಲ್ಲ. ಸರಕಾರ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಮತ್ತು ಮಾಸಾಶನ ನೀಡುವ ಮೂಲಕ ವಾದ್ಯ ಕಲಾವಿದರ ಬದುಕಿಗೆ ಆರ್ಥಿಕ ಭದ್ರತೆ ಕಲ್ಪಿಸಬೇಕು. ಅದಕ್ಕಾಗಿ ಕಲಾವಿದರು ಕೂಡ ಸಂಘಟಿತ ಪ್ರಯತ್ನ ಮಾಡಬೇಕು ಎಂದು ಶ್ರೀಕ್ಷೇತ್ರ ಕಚ್ಚೂರು ಇದರ ಧರ್ಮದರ್ಶಿ ಗೋಕುಲ್‌ದಾಸ್ ಬಾರ್ಕೂರು ಹೇಳಿದರು.
ದ.ಕ.ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಾದ್ಯ ಕಲಾವಿದರ ಸಂಘದ ವತಿಯಿಂದ ರವಿವಾರ ನಗರದ ಉರ್ವ ಡಾ.ಬಿ. ಆರ್.ಅಂಬೇಡ್ಕರ್ ಸಭಾಭವನದಲ್ಲಿ ನಡೆದ ವಾದ್ಯ ಕಲಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ನೂರು ವರ್ಷದ ಹಿಂದೆ ತಳ ಸಮುದಾಯದವರ ಮನೆ ಬಾಗಿಲಲ್ಲಿ ಇತರ ಸಮುದಾಯದವರು ಬ್ಯಾಂಡ್ ವಾದ್ಯಗಳನ್ನು ಬಳಸಲು ಮುಂದಾಗುತ್ತಿರಲಿಲ್ಲ. ಸ್ವಾಭಿಮಾನಿಗಳಾದ ತಳಸಮುದಾಯದವರು ಅನಿವಾರ್ಯವಾಗಿ ವಾದ್ಯಗಳನ್ನು ನುಡಿಸಲು ಕಲಿತುಕೊಂಡರು. ನೋವಿನಿಂದ ಬಂದ ಈ ಕಲೆಯನ್ನು ನೆಚ್ಚಿಕೊಂಡು ಇಂದು ದೈವಾರಾಧನೆ, ನಾಗರಾಧನೆ ಸಹಿತ ಮುಜರಾಯಿ ದೇವಸ್ಥಾನಗಳಲ್ಲಿ ವಾದ್ಯಗಳನ್ನು ನುಡಿಸುತ್ತಾರೆ ಎಂದು ಗೋಕುಲ್‌ದಾಸ್ ಬಾರ್ಕೂರು ಹೇಳಿದರು.
ಚಿತ್ರನಟ ರಾಜ್ ಬಿ. ಶೆಟ್ಟಿ ಮಾತನಾಡಿ, ತುಳುನಾಡಿನ ಸಂಸ್ಕೃತಿಯ ಉಳಿವಿನಲ್ಲಿ ವಾದ್ಯ ಕಲಾ ಮೇಳದ ಪಾತ್ರ ಸಾಕಷ್ಟಿದೆ. ಈ ಕಲಾವಿದರು ಕೇವಲ ಅಕ್ಕಿ, ತೆಂಗಿನಕಾಯಿ ಪಡೆದುಕೊಂಡು ದೈವಸೇವೆ ಮಾಡುತ್ತಿರುವುದು ಗಮನಾರ್ಹ. ಹಾಗಾಗಿ ಸಮಾಜ, ಸರಕಾರ ಇಂತಹ ದೈವದ ಸೇವೆ, ನರ್ತಕ, ವಾದ್ಯಕಲೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಬೇಕಿದೆ ಎಂದರು.
ವಾದ್ಯಕಲೆ ಸಹಿತ ದೈವದ ಸೇವೆಗೈದವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಮೊದಲು ಮಂಗಳಾ ಕ್ರೀಡಾಂಗಣದಿಂದ ಉರ್ವದ ಡಾ. ಬಿ.ಆರ್.ಅಂಬೇಡ್ಕರ್ ಭವನದವರೆಗೆ ವಾದ್ಯಮೇಳದ ಮೆರವಣಿಗೆ ನಡೆಯಿತು.
ಈ ಸಂದರ್ಭ ಮನಪಾ ಸದಸ್ಯ ಭಾಸ್ಕರ ಮೊಯ್ಲಿ, ನಮ್ಮ ಕುಡ್ಲದ ವ್ಯವಸ್ಥಾಪಕ ಲೀಲಾಕ್ಷ ಕರ್ಕೆರಾ, ಮಂಗಳೂರು ಕಂಬಳ ಅಧ್ಯಕ್ಷ ಕ್ಯಾ.ಬ್ರಿಜೇಶ್ ಚೌಟ, ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಬಾಲಕೃಷ್ಣ ರೈ ಬಾಂದೊಟ್ಟುಗುತ್ತು, ಲೋಕನಾಥ ಮಾರ್ಲ, ರಂಗನಾಥ ಎ, ಚಂದ್ರಶೇಖರ ವಾಮಂಜೂರು, ಕೃಷ್ಣ ಎಸ್ಕೋಡಿ ಉಪಸ್ಥಿತರಿದ್ದರು.
ಕೆ.ಕೆ. ಪೇಜಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾದ್ಯ ಕಲಾ ಮೇಳದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ ಸ್ವಾಗತಿಸಿದರು. ರೋಹಿತ್ ಉಳ್ಳಾಲ ಹಾಗೂ ದಯಾನಂದ ಕತ್ತಲ್‌ಸಾರ್ ಕಾರ್ಯಕ್ರಮ ನಿರೂಪಿಸಿದರು.