ಕೊಣಾಜೆಯಲ್ಲಿ ಗೂಡುದೀಪ ಸಂಗಮ, ದೀಪಾವಳಿ ಸಂಭ್ರಮ
ಕೊಣಾಜೆ : ಗ್ರಾಮೀಣ ಭಾಗದ ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ದೀಪಾವಳಿ ಎಂಬ ಬೆಳಕಿನ ಹಬ್ಬ ನಮ್ಮ ಮನೆ-ಮನವನ್ನು ಮಾತ್ರವಲ್ಲ ಇಡೀ ಸಮಾಜ ಹಾಗೂ ಜಗತ್ತನ್ನೇ ಬೆಳಗಲಿ. ಈ ಹಬ್ಬವು ಸಮುದಾಯ ಪ್ರಜ್ಞೆಗಿಂತ ಮಿಗಿಲಾಗಿ ವಿಶ್ವಪ್ರಜ್ಞೆಯನ್ನು ಮೂಡಿಸುವಂತಾಗಲಿ ಎಂದು ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಅವರು ಅಭಿಪ್ರಾಯಪಟ್ಟರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಗ್ರಾಮಚಾವಡಿ ಕೊಣಾಜೆ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಕೊಣಾಜೆ, ಬ್ರಹ್ಮಶ್ರೀ ನಾರಾಯಣ ಗುರು ಯುವ ಘಟಕ ಹಾಗೂ ಮಹಿಳಾ ಘಟಕ ಇದರ ವತಿಯಿಂದ ಪರಂಡೆಯ ಯುಬಿಎಂಸಿ ಶಾಲೆಯಲ್ಲಿ ನಡೆದ ಗೂಡುದೀಪ ಸಂಗಮ, ದೀಪಾವಳಿ ಸಂಭ್ರಮ -2025 ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಇಂದಿನ ಆಧುನಿಕತೆಯಲ್ಲಿ ದೀಪಾವಳಿಯಂತಹ ಹಬ್ಬಗಳನ್ನು ಪಾರಂಪರಿಕವಾಗಿ ಆಚರಿಸಿಕೊಂಡು ಬಂದ ರೀತಿಯನ್ನು ನಾವು ಮರೆಯದೆ ಅದರ ಮಹತ್ವವನ್ನು ಇಂದಿನ ಮಕ್ಕಳಿಗೂ ತಿಳಿಯಪಡಿಸುವ ಕಾರ್ಯ ಆಗಬೇಕಿದೆ ಎಂದರು.
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇದರ ಅಧ್ಯಕ್ಷರಾದ ವಿಜೇತ್ ಪಜೀರು ಅವರು, ನಮ್ಮ ದೇಶವು ಏಕತೆಯಲ್ಲಿ ವೈವಿಧ್ಯತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಈ ದೀಪಾವಳಿ ಹಬ್ಬ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಆಚರಿಸುವ ವಿಶೇಷ ಹಬ್ಬವಾಗಿದೆ. ಈ ಹಬ್ಬವು ಒಗ್ಗಟ್ಟಿನೊಂದಿಗೆ ಧನಾತ್ಮಕ ಭಾವವನ್ನು ಮೂಡಿಸುತ್ತದೆ ಹೇಳಿದರು.
ಗ್ರಾಮ ಸಮಿತಿಯ ಅಧ್ಯಕ್ಷರಾದ ಗಣೇಶ್ ಅಮೀನ್ ಮುಟ್ಟಿಂಜ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್, ಮುಖಂಡರಾದ ಮುರಳೀಧರ ಕೊಣಾಜೆ, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕದ ಅಧ್ಯಕ್ಷರಾದ ಬಬಿತಾ ಯಾದವ ಪೂಜಾರಿ, ಯುಬಿಎಂಸಿ ಶಾಲೆಯ ಸಂಚಾಲಕರಾದ ಎಡ್ವರ್ಡ್ ಜೆ ಐಮನ್, ಕೊಣಾಜೆ ಪಂಚಾಯತ್ ಉಪಾಧ್ಯಕ್ಷರಾದ ಹರಿಶ್ಚಂದ್ರ ಸೆಟ್ಟಿಗಾರ್, ಮುಡಿಪು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಅಜಿತ್ ಪೂಜಾರಿ ಪಜೀರು, ಯುವವಾಹಿನಿ ಘಟಕದ ಅಧ್ಯಕ್ಣರಾದ ಬಾಬು ಬಂಗೇರ ಮುಟ್ಟಿಂಜ, ಯುವ ಘಟಕದ ಅಧ್ಯಕ್ಣರಾದ ಅಜಿತ್ ಕುಮಾರ್ ತಾರಿಪ್ಪಾಡಿ, ಮಹಿಳಾ ಘಟಕದ ಅಧ್ಯಕ್ಣರಾದ ಸರಿತಾ ಆರ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯದರ್ಶಿ ಸುರೇಖಾ ಹರೀಶ್ ಪೂಜಾರಿ ಸ್ವಾಗತಿಸಿದರು. ಅಜಿತ್ ಕುಮಾರ್ ತಾರಿಪಾಡಿ ವಂದಿಸಿದರು. ರವೀಂದ್ರ ಬಂಗೇರ, ಹರ್ಷಿತ, ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.
ಬಣ್ಣ ಬಣ್ಣದ ಗೂಡುದೀಪ ಸಂಗಮ :
ಕಾರ್ಯಕ್ರಮದ ಪ್ರಯುಕ್ತ ಸಾಂಪ್ರದಾಯಿಕ ಹಾಗೂ ಆಧುನಿಕ ವಿಭಾಗದಲ್ಲಿ ಗೂಡು ದೀಪಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧಿಗಳಿಂದ ಮೂಡಿಬಂದ ಬಣ್ಣ ಬಣ್ಣದ ಗೂಡುದೀಪಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು.