×
Ad

ಪಕ್ಕಲಡ್ಕದಲ್ಲಿ ಸೌಹಾರ್ದ ದೀಪಾವಳಿ

Update: 2023-11-13 17:50 IST

ಮಂಗಳೂರು, ನ.13: ದೇಶಾದ್ಯಂತ ನಡೆಯುತ್ತಿರುವ ಮತೀಯ ರಾಜಕಾರಣದಿಂದ ಧರ್ಮಗಳ ನಡುವೆ ಬಿರುಕು ಬೀರಿದೆ. ಇದರಿಂದ ದುಡಿದು ತಿನ್ನುವ ಸಾಮಾನ್ಯ ಜನರು ಕಂಗೆಡುತ್ತಿದ್ದಾರೆ. ಈ ಸಂದರ್ಭ ದೇಶದ ಸಂವಿಧಾನದ ಆಶಯ ಮತ್ತು ಜಾತ್ಯತೀತ ಪರಂಪರೆಗಳನ್ನು ಉಳಿಸಲು ಹೋರಾಡುತ್ತಿರುವ ಡಿವೈಎಫ್‌ಐ ಮತ್ತು ಊರಿನ ಸಮಾರಸ್ಯ ಉಳಿಸಲು ಪ್ರಯ ತ್ನಿಸುವ ಪಕ್ಕಲಡ್ಕ ಯುವಕ ಮಂಡಲ ಈ ಸಮಾಜಕ್ಕೆ ಮಾದರಿ ಎಂದು ಪಕ್ಕಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಅಲ್ತಾಫ್ ಅಭಿಪ್ರಾಯಪಟ್ಟರು.

ಡಿವೈಎಫ್‌ಐ ಬಜಾಲ್ ಪಕ್ಕಲಡ್ಕ ಹಾಗೂ ಪಕ್ಕಲಡ್ಕ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ರವಿವಾರ ಪಕ್ಕಲಡ್ಕದಲ್ಲಿ ಸೌಹಾರ್ದ ದೀಪಾವಳಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸತ್ಯನಾರಾಯಣ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಸಾಲ್ಯಾನ್, ಮಂಗಳೂರು ಅಸೋಸಿಯೇಶನ್ ಸೌದಿ ಅರೇಬಿಯಾ ಸಂಸ್ಥೆಯ ಮಾಜಿ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್, ಬಜಾಲ್ ಹೋಲಿ ಸ್ಪಿರಿಟ್ ಚರ್ಚ್‌ನ ಮಾಜಿ ಉಪಾಧ್ಯಕ್ಷ ದೀಪಕ್ ಡಿಸೋಜ, ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ಚ, ಡಿವೈಎಫ್‌ಐ ಪಕ್ಕಲಡ್ಕ ಘಟಕದ ಮಾಜಿ ಅಧ್ಯಕ್ಷ ಯಶ್‌ರಾಜ್ ಬಜಾಲ್ ಮಾತನಾಡಿದರು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಪ್ರಥ್ವಿರಾಜ್, ಪ್ರಿಯಾಂಶು ದಾಸ್ ಅವರನ್ನು ಸನ್ಮಾನಿಸಲಾಯಿತು. ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷ ನಾಗರಾಜ್ ಬಜಾಲ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಂಗಳೂರು ನಗರ ಅಧ್ಯಕ್ಷ ಜಗದೀಶ್ ಬಜಾಲ್, ಶಿಕ್ಷಕಿ ಅಶ್ವಿನಿ ಬಜಾಲ್, ಎಸ್‌ಎಫ್‌ಐ ನಗರಾಧ್ಯಕ್ಷ ಪ್ರಥಮ್, ಡಿವೈಎಫ್‌ಐ ಕಾರ್ಯದರ್ಶಿ ಆನಂದ ಎನೆಲ್ಮಾರ್ ಉಪಸ್ಥಿತರಿದ್ದರು.

ಪಕ್ಕಲಡ್ಕ ಮಹಿಳಾ ಮಂಡಲದ ಕಾರ್ಯದರ್ಶಿ ಚಿತ್ರಾ ಬಜಾಲ್ ಸ್ವಾಗತಿಸಿದರು. ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಪ್ರೀತೇಶ್ ಬಜಾಲ್ ವಂದಿಸಿದರು. ಚಂಚಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News