×
Ad

"ನಾನು ಪಾಳೇಗಾರ ಅಲ್ಲ, ಕ್ಷೇತ್ರದ ಕಾವಲುಗಾರ": ಸಚಿವ ದಿನೇಶ್ ಗುಂಡೂರಾವ್ ಗೆ ವೇದವ್ಯಾಸ ಕಾಮತ್ ತಿರುಗೇಟು

Update: 2025-02-17 18:57 IST

ಮಂಗಳೂರು: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು "ಶಾಸಕ ವೇದವ್ಯಾಸ ಕಾಮತ್ ಏನು ಇಲ್ಲಿನ ಪಾಳೇಗಾರನಾ? ಎಂದು ಕೇಳಿದ್ದಾರೆ. ನಾನು ಇದಕ್ಕೆ ಉತ್ತರ ಕೊಡುವುದಿಲ್ಲ, ಆದರೆ ನಾನು ಪಾಳೇಗಾರ ಅಲ್ಲ ಕ್ಷೇತ್ರದ ಕಾವಲುಗಾರ" ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ.

‘‘ನಾನು ಕಾವಲುಗಾರ ಎಂದು ಕ್ಷೇತ್ರದ ಜನತೆಯೇ ಉತ್ತರ ಕೊಟ್ಟಿದ್ದಾರೆ. ಅದನ್ನು ಅವರು ಮೊದಲು ಅರಗಿಸಿಕೊಳ್ಳಲಿ ಸಾಕು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಂಗಳಾದೇವಿಯಲ್ಲಿ ಉದ್ಘಾಟನೆಗೊಂಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಬಡ ರೋಗಿಗಳನ್ನು ಹೊರದಬ್ಬಿ ಕೇವಲ ನಾಲ್ಕೆ ದಿನಕ್ಕೆ ಬೀಗ ಹಾಕಿ ಸ್ವಪ್ರತಿಷ್ಠೆ ಹಾಗೂ ರಾಜಕೀಯಕ್ಕಾಗಿ ಮರು ಉದ್ಘಾಟನೆ ಮಾಡಿದ್ದಾರೆ. ಆ ಮೂಲಕ ಹೊಸ ಮತ್ತು ಕೆಟ್ಟ ಸಂಪ್ರದಾಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ನಾಂದಿ ಹಾಡಿದ್ದಾರೆ. ಇದರಿಂದ ಕಾಂಗ್ರೆಸ್ಸಿಗೆ ಕಿಂಚಿತ್ತಾದರೂ ಶೋಭೆ ಇದೆಯೇ?" ಎಂದು ಪ್ರಶ್ನಿಸಿದರು.

ಸರಕಾರದ ಯಾವುದೇ ಯೋಜನೆಗಳ ಉದ್ಘಾಟನೆಯ ರೂಪುರೇಷೆ ಸಿದ್ಧಪಡಿಸುವ ಕಾರ್ಯ ಶಾಸಕರದ್ದಲ್ಲ. ಅದು ಸರಕಾರ ಅಧಿಕಾರಿಗಳ ಮಟ್ಟದಲ್ಲಿ ನಡೆಯುವಂತದ್ದು. ಹಾಗಾಗಿ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿಲ್ಲದಿದ್ದರೆ ಅದಕ್ಕೆ ನಾವು ಹೊಣೆಯಲ್ಲ. ಸಚಿವರ ಮಾತಿನಂತೆ ಹೋದರೆ ಇನ್ನು ಮೇಲೆ ಜಿಲ್ಲೆಯಲ್ಲಿ ಶಾಸಕರುಗಳು, ಯಾವುದೇ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರ ಪಟ್ಟಿ ಸಿದ್ದಪಡಿಸುವ, ಅವರನ್ನು ಆಹ್ವಾನಿಸುವ ಆಮಂತ್ರಣ ಪತ್ರಿಕೆ ಅಧಿಕೃತವೋ, ಅನಧಿಕೃತವೋ ಎಂದು ಪರಿಶೀಲಿಸುವ ಹೆಚ್ಚುವರಿ ಜವಾಬ್ದಾರಿ ಹೊರ ಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರದ ಶಾಸಕನಾಗಿ ನಾನು ಹಾಗೂ ಈ ಹಿಂದೆ ಮೇಯರ್ ಆಗಿದ್ದ ಸ್ಥಳೀಯ ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿಯವರು ಈ ಯೋಜನೆಯು ಶುರುವಾದಾಗಿನಿಂದ ಹಿಡಿದು ಮುಗಿಯುವವರೆಗೆ ಪ್ರತಿ ಹಂತದಲ್ಲಿಯೂ ಬಹಳ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದ್ದೇವೆ. ಅಂದಿನ ಸಂಸದ ನಳಿನ್ ಕುಮಾರ್ ಕಟೀಲ್ ರವರ ಸಹಕಾರವೂ ಇದರ ಹಿಂದಿದೆ. ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಅಧಿಕೃತ ಆಮಂತ್ರಣ ಪತ್ರಿಕೆಯಲ್ಲಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯುಟಿ ಖಾದರ್, ಎಂಎಲ್‌ಸಿ ಮಂಜುನಾಥ ಭಂಡಾರಿ, ಐವನ್ ಡಿಸೋಜ ರವರ ಹೆಸರೂ ಸಹ ಇದೆ. ಆದರೂ ಸಹ ಗುಂಡೂರಾವ್ ಬಂದಿಲ್ಲ. ಬಹುಷಃ ಇಂತಹ ಜನೋಪಯೋಗಿ ಯೋಜನೆಯಲ್ಲಿ ನಮ್ಮದು ಕಿಂಚಿತ್ತೂ ಕೊಡುಗೆ ಇಲ್ಲ, ಮತ್ತೆ ಯಾವ ಮುಖ ಇಟ್ಟುಕೊಂಡು ಭಾಗವಹಿಸುವುದು ಎಂಬ ಮುಜುಗರ ಅವರನ್ನು ಕಾಡುತ್ತಿರಬಹುದು. ಎರಡು ಮೂರು ತಿಂಗಳಿಗೊಮ್ಮೆ ಬರುವ ಉಸ್ತುವಾರಿ ಸಚಿವರಿಗೆ ಇಲ್ಲಿನ ಯೋಜನೆಗಳ ಸ್ಥಿತಿಗತಿ ಗೊತ್ತಾಗುವುದು ಹೇಗೆ? ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ರಮೇಶ್ ಕಂಡೆಟ್ಟು, ಮಾಜಿಮೇಯರ್ ಪ್ರೇಮಾನಂದ ಶೆಟ್ಟಿ ರವಿಶಂಕರ್ ಮಿಜಾರ್, ಭಾನುಮತಿ, ಪೂರ್ಣಿಮಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News