×
Ad

ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಳ : ಭಾಗೀರಥಿ ಮುರಳ್ಯ ಆರೋಪ

Update: 2025-11-03 16:37 IST

ಮಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಳಗೊಂಡಿವೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಆರೋಪಿಸಿದರು.

ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 65ಕ್ಕಿಂತ ಹೆಚ್ಚು ಮಹಿಳೆಯರ ಹತ್ಯೆಯಾಗಿದೆ. 1,300ಕ್ಕಿಂತ ಹೆಚ್ಚು ಮಹಿಳಾ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಮೈಸೂರಿನಲ್ಲಿ ಸಣ್ಣ ಬಾಲಕಿ ಮೇಲೆ, ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್, ಕಾಲೇಜು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಸೇರಿ ಹಲವಾರು ಪ್ರಕರಣಗಳು ನಡೆದಿವೆ. ಅದಲ್ಲದೆ, 100ಕ್ಕೂ ಹೆಚ್ಚು ಯುವಕರ ಕೊಲೆಯಾಗಿದ್ದು, ಗೃಹ ಸಚಿವರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದರು.

20ಕ್ಕೂ ಹೆಚ್ಚು ಅಧಿಕಾರಿಗಳು ಅಸಹಜ ಸಾವಿಗೀಡಾಗಿದ್ದು, ಸರ್ಕಾರದ ಕಮಿಷನ್ ಕಾಟಕ್ಕೆ 7 ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಸಾಮಾಜಿಕ ಶೈಕ್ಷಣಿಕ ಗಣತಿ ಮಾಡುವ ಸಂದರ್ಭದಲ್ಲಿ ಸರ್ಕಾರದ ಒತ್ತಡದಿಂದ 6 ಜನ ಪ್ರಾಣ ತೆತ್ತಿದ್ದಾರೆ. ರಾಜ್ಯದಲ್ಲಿ 15ಕ್ಕಿಂತ ಹೆಚ್ಚು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ದಯಾಮರಣ ಕೇಳಿ ಗುತ್ತಿಗೆದಾರರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ರಸ್ತೆ ಗುಂಡಿಯಿಂದ ರಾಜ್ಯದಲ್ಲಿ 5ಕ್ಕಿಂತ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದು ಸರ್ಕಾರದ ನಿರ್ಲಕ್ಷ್ಯದಿಂದ ಆದ ಸಾವುಗಳು. ರಾಜ್ಯದಲ್ಲಿ 750ಕ್ಕೂ ಹೆಚ್ಚು ಬಾಣಂತಿಯರು, 1,300 ನವಜಾತ ಶಿಶುಗಳು ಸಾವಿಗೀಡಾಗಿವೆ. 5,000 ಹೆಣ್ಣು ಭ್ರೂಣ ಹತ್ಯೆಗಳಾಗಿದ್ದು, ಸರ್ಕಾರ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷಿಸಿದೆ ಎಂದು ಅವರು ಹೇಳಿದರು.

ಆನೆ ದಾಳಿಗೆ 25ಕ್ಕಿಂತ ಹೆಚ್ಚು ಸಾವಾಗಿದ್ದು, ಆನೆ- ಮನುಷ್ಯರ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. 4 ಬ್ಯಾಂಕ್ ದರೋಡೆ ನಡೆದಿದೆ. ಸೈಬರ್ ಕ್ರೈಂನಲ್ಲಿ ಕರ್ನಾಟಕ ನಂ.1, ಕ್ರೈಂ ಪ್ರಕರಣಗಳಲ್ಲಿ ದೇಶದಲ್ಲೇ ಬೆಂಗಳೂರು 3 ಸ್ಥಾನ ಪಡೆದಿದ್ದು, ಇದು ಗೃಹ ಸಚಿವರ ಸಾಧನೆಯಾಗಿದೆ. ಮೈಸೂರಿನಲ್ಲಿ ಡ್ರಗ್ ಕಾರ್ಖಾನೆ ಪ್ರಕರಣದಲ್ಲಿ ಕಾಂಗ್ರೆಸ್ ಮಂತ್ರಿಗಳ ಕೈವಾಡದ ಶಂಕೆ ಇದ್ದು, ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತನೇ ನಿಷೇಧಿತ ಡ್ರಗ್ ಪ್ರಕರಣದಲ್ಲಿ ಸಿಲುಕಿದ್ದು, ಇದರ ಬಗ್ಗೆ ಸಚಿವರು ಯಾವುದೇ ಹೇಳಿಕೆ ನೀಡಿಲ್ಲ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬಂಧಿಯಾಗಿದ್ದಾರೆ. 4 ಶಾಸಕರು ಕಳೆದ ಆರು ತಿಂಗಳಲ್ಲಿ ಜೈಲಿಗೆ ಹೋಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಎಂದರು.

ರೈತರ ಬ್ಯಾಂಕ್ ಖಾತೆಗೆ ಸೈಬರ್ ವಂಚಕರು ಕನ್ನ ಹಾಕುತ್ತಿದ್ದು, ಕಳೆದೆ ಏಳು ತಿಂಗಳಲ್ಲಿ 8,620 ಪ್ರಕರಣಗಳು ಕಂಡುಬಂದಿದೆ. ಸೈಬರ್ ವಂಚಕರ ಬಗ್ಗೆ ರೈತರಿಗೆ ಅರಿವು ಮೂಡಿಸಲು ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ಆಸ್ತಿ ದ್ವಿಗುಣಗೊಂಡಿದೆ. ವಕ್ಫ್ ಆಸ್ತಿಗೆ ಕಾಂಪೌಂಡ್ ಮತ್ತು ಇತರ ಸೌಲಭ್ಯಗಳಿಗಾಗಿ ವಿಶೇಷ ನಿಧಿಯನ್ನು ಸರ್ಕಾರ ನೀಡುತ್ತಿದೆ. ಆದರೆ, ಹಿಂದೂ ದೇವಾಲಯ ದುರಸ್ತಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆರೋಗ್ಯ ಇಲಾಖೆಯಿಂದ ಹೊಸ ವೈದ್ಯರ ಮತ್ತು ದಾದಿಯರ ಯಾವುದೇ ನೇಮಕಾತಿ ನಡೆಯದೇ ಆಸ್ಪತ್ರೆಗಳಲ್ಲಿ ವೈದ್ಯರ ಮತ್ತು ದಾದಿಯರ ಕೊರತೆ, ಔಷಧಗಳ ಕೊರತೆ ಉಂಟಾಗಿದೆ ಎಂದು ಶಾಸಕರು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಉಪಾಧ್ಯಕ್ಷೆ ವಜ್ರಾಕ್ಷಿ ಶೆಟ್ಟಿ, ಸಂಧ್ಯಾ ವೆಂಕಟೇಶ್, ಸುಮಾ ಅರುಣ್, ಸುಷ್ಮಾ ಕೋಟ್ಯಾನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News