×
Ad

ಜಾಗೃತಿಯ ಮಧ್ಯೆಯೂ ಸೈಬರ್ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳ

ವಂಚನೆಗೆ ಒಳಗಾಗುತ್ತಿರುವವರಲ್ಲಿ ಸುಶಿಕ್ಷಿತರೇ ಅಧಿಕ!

Update: 2025-12-08 11:56 IST

ಸಾಂದರ್ಭಿಕ ಚಿತ್ರ PC: istockphoto.com

ಮಂಗಳೂರು, ಡಿ.7: ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಪೊಲೀಸ್ ಇಲಾಖೆಯು ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಇದಕ್ಕೆ ಕಡಿವಾಣ ಸಾಧ್ಯ ವಾಗುತ್ತಿಲ್ಲ. ಅದರಲ್ಲೂ ಅನಕ್ಷರಸ್ಥರಿಗಿಂತ ವಿದ್ಯಾವಂತರೇ ಸೈಬರ್ ಅಪರಾಧದ ಸುಳಿಗೆ ಸಿಲುಕುತ್ತಿರುವುದು ಸಾರ್ವಜನಿಕ ವಲಯ ದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ.

ದಿನನಿತ್ಯ ಬೆಳಕಿಗೆ ಬರುತ್ತಿರುವ ಸೈಬರ್ ಅಪರಾಧ ಪ್ರಕರಣ ಗಳಲ್ಲಿ ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನು ಸುಶಿಕ್ಷಿತರು ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಎಗ್ಗಿಲ್ಲದೆ ಕನ್ನ ಹಾಕುವ ಸೈಬರ್ ವಂಚಕರು, ನಾನಾ ರೀತಿಯ ತಂತ್ರಜ್ಞಾನ ಬಳಸಿ ಜನರನ್ನು ವಂಚನೆಯ ಜಾಲದಲ್ಲಿ ಬೀಳಿಸುವುದು ಸಾಮಾನ್ಯವಾಗಿದೆ. ಆಧಾರ್ ಮತ್ತಿತರ ದಾಖಲೆ ಗಳು ಅಥವಾ ಬೆರಳಚ್ಚನ್ನೇ ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾಕಿ ದುಡ್ಡು ದೋಚುತ್ತಿರುವ ಪ್ರಕರಣಗಳು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಆಧುನಿಕ ಯುಗದಲ್ಲಿ ಬಹುತೇಕ ಎಲ್ಲರ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳು ಮೊಬೈಲ್ ನಂಬರ್‌ಗೆ ಲಿಂಕ್ ಆಗಿವೆ. ಹೀಗೆ ಲಿಂಕ್ ಆಗಿರುವ ಮೊಬೈಲ್ ಅಥವಾ ಬಯೋಮೆಟ್ರಿಕ್ ವ್ಯವಸ್ಥೆಯನ್ನು ದುರುಪಯೋಗಪಡಿಸಿ ಸೈಬರ್ ಅಪರಾಧಿಗಳು ಬ್ಯಾಂಕ್ ಖಾತೆಯಿಂದ ಸುಲಭವಾಗಿ ಹಣ ಲಪಟಾಯಿಸುತ್ತಾರೆ.

ಸಾರ್ವಜನಿಕರು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆ ಯಲು ಆಧಾರ್ ಸಂಖ್ಯೆ, ಬೆರಳಚ್ಚು ನೀಡುವುದು ಅನಿವಾರ್ಯ ವಾಗಿರುತ್ತದೆ. ಮೊಬೈಲ್ ಸಿಮ್ ಖರೀದಿಯ ವೇಳೆಯೂ ಬೆರಳಚ್ಚು ನೀಡಲಾಗುತ್ತದೆ. ಸಾಮಾನ್ಯ ಜನಸೇವಾ ಕೇಂದ್ರಗಳು, ಬ್ಯಾಂಕ್ ಕಚೇರಿಗಳು ಮತ್ತಿತರ ಕೇಂದ್ರಗಳಲ್ಲಿ ಜನರು ನೀಡುವ ಬೆರಳಚ್ಚುಗಳ ಮಾಹಿತಿ ಸೋರಿಕೆಯಾಗಿ ಸೈಬರ್ ವಂಚಕರ ಕೈ ಸೇರುತ್ತಿರುವುದು ಆತಂಕಕಾರಿಯಾಗಿದೆ.

ಕೆಲವೊಮ್ಮೆ ನೇರವಾಗಿ ಆಧಾರ್ ಡಾಟಾ ಹ್ಯಾಕ್ ಮಾಡಿಯೂ ಖಾತೆಗೆ ಕನ್ನ ಹಾಕುತ್ತಾರೆ. ಆಧಾರ್ ಬಯೋಮೆಟ್ರಿಕ್ ಡೇಟಾ ಅತ್ಯಂತ ಗೌಪ್ಯ ಮಾಹಿತಿಯಾಗಿದ್ದು, ಅದು ಹ್ಯಾಕ್ ಆದರೆ ಆರ್ಥಿಕ ನಷ್ಟವಲ್ಲದೆ, ವೈಯಕ್ತಿಕ ಮಾಹಿತಿಯೂ ಇನ್ನೊಬ್ಬರ ಪಾಲಾಗುತ್ತದೆ ಎಂದು ಸೈಬರ್ ತಜ್ಞರು ಹೇಳುತ್ತಾರೆ.

ಬೆರಳಚ್ಚು ನಮ್ಮ ಗುರುತು ಆಗಿದೆ. ಸೈಬರ್ ವಂಚನೆ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ತಂತ್ರಜ್ಞಾನದ ಸಹಾಯದಿಂದ ಜನರ ವೈಯಕ್ತಿಕ ಮಾಹಿತಿಯೇ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತಿದೆ. ಸಾರ್ವಜನಿಕರು ಆದಷ್ಟು ಎಚ್ಚರ ಮತ್ತು ಜಾಗೃತಿ ವಹಿಸುವುದು ಇಂತಹ ಅಪರಾಧಗಳಿಂದ ರಕ್ಷಣೆ ಪಡೆಯದೆ ನಿರ್ವಾಹವಿಲ್ಲ ಎಂದು ಸೈಬರ್ ತಜ್ಞರು ಅಭಿಪ್ರಾಯಪಡುತ್ತಾರೆ.

ಸೈಬರ್ ವಂಚನೆಗೆ ಸಂಬಂಧಿಸಿದಂತೆ ಠಾಣಾ ಮಟ್ಟದಲ್ಲೇ ಮಾಹಿತಿ ನೀಡಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಜಾಗೃತಿ ಮೂಡಿಸಲಾಗುತ್ತದೆ. ಎಚ್ಚರಿಕೆ ವಹಿಸಲು ಸೂಚಿಸಲಾಗುತ್ತದೆ. ಆಧಾರ್ ಅಥವಾ ಬೆರಳಚ್ಚು ಪರಿಶೀಲನೆ ಕುರಿತಾಗಿ ಬರುವ ಕರೆಗಳನ್ನು ನಿರ್ಲಕ್ಷಿಸಬೇಕು, ಸ್ಪಷ್ಟತೆಯಿಲ್ಲದೆ ಯಾವುದೇ ಕರೆ, ಸಂದೇಶಗಳಿಗೆ ಸ್ಪಂದಿಸಬಾರದು. ಇಲಾಖೆಯು ಸದಾ ಜಾಗೃತಿ ಮೂಡಿಸುತ್ತಿದ್ದು, ಸಾರ್ವಜನಿಕರು ಕೂಡ ಸ್ವಯಂ ಎಚ್ಚರ ವಹಿಸುವ, ಜಾಗೃತಿ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ.

-ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ಆಯುಕ್ತರು, ಮಂಗಳೂರು ನಗರ

ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ? :

► ಯುಐಡಿಎಐ ವೆಬ್‌ಸೈಟ್ ಅಥವಾ ಎಂ-ಆಧಾರ್ ಆ್ಯಪ್ ಮೂಲಕ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡಬಹುದು. ಅಗತ್ಯವಿದ್ದಾಗ ಮಾತ್ರ ಅನ್‌ಲಾಕ್ ಮಾಡಿ ಉಪಯೋಗಿಸಬಹುದು.

► ಬ್ಯಾಂಕ್ ಖಾತೆಯ ವ್ಯವಹಾರಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು.

► ಅನುಮಾನಾಸ್ಪದ ಕರೆ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು.

► ಸೈಬರ್‌ಗಳಲ್ಲಿ ಬೆರಳಚ್ಚು ನೀಡುವಾಗ ಅಥವಾ ಪ್ರಿಂಟಿಂಗ್ ಶಾಪ್‌ಗಳಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಮಾಡಿಸುವಾಗ ಎಚ್ಚರ ವಹಿಸಬೇಕು.

► ಒಟಿಪಿ ಅಥವಾ ಆಧಾರ್ ವಿವರ ಇತರರಿಗೆ ಹಂಚಿಕೊಳ್ಳಬಾರದು.

► ವಂಚನೆ ಗಮನಕ್ಕೆ ಬಂದ ತಕ್ಷಣ ಸೈಬರ್ ಸಹಾಯವಾಣಿ 1930ಗೆ ಕರೆ ಮಾಡಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News