ಸಮಸ್ತ ಮುಶಾವರ ಕೇಂದ್ರ ಸಮಿತಿ ಸದಸ್ಯ ಕಾಡೇರಿ ಮುಹಮ್ಮದ್ ಮುಸ್ಲಿಯಾರ್ ನಿಧನ
ಮಲಪ್ಪುರಂ: ಸಮಸ್ತ ಕೇರಳ ಜಮೀಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸಮಿತಿ ಸದಸ್ಯ, ಖಾಝಿ, ಖ್ಯಾತ ವಿದ್ವಾಂಸ ಕಾಡೇರಿ ಮುಹಮ್ಮದ್ ಮುಸ್ಲಿಯಾರ್ (63) ಗುರುವಾರ ಬೆಳಗ್ಗೆ ಮಲಪ್ಪುರಂ ಎಂಬಿಎಚ್ ಆಸ್ಪತ್ರೆಯಲ್ಲಿ ನಿಧನರಾದರು. ಸಂಜೆ ಮಲಪ್ಪುರಂನ ಆಲತ್ತೂರ್ಪಡಿ ಜುಮಾ ಮಸೀದಿಯ ಆವರಣದಲ್ಲಿ ದಫನ ಕ್ರಿಯೆ ನಡೆಸಲಾಯಿತು.
ಪತ್ನಿ, ನಾಲ್ಕು ಮಂದಿ ಪುತ್ರರು ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಮಲಪ್ಪುರಂ ಜಿಲ್ಲೆಯ ಪೆರಿಂಬಳಂನಲ್ಲಿ ಕಾಟೇರಿ ಅಬ್ದುಲ್ ವಹಾಬ್ ಮುಸ್ಲಿಯಾರ್-ಮೈಮುನಾರ ಪುತ್ರನಾಗಿ 1963ರಲ್ಲಿ ಕಾಡೇರಿ ಮುಹಮ್ಮದ್ ಮುಸ್ಲಿಯಾರ್ ಜನಿಸಿದರು. ಮೇಲ್ಮುರಿ, ಇರುಂಬುಝಿ, ಚೆಮ್ಮಂಕಡವ್, ಕೊಂಕಯಂ, ರಂಡತ್ತಾಣಿ, ಕಿಷ್ಕೆಪುರಂನಲ್ಲಿ ಅಧ್ಯಯನ ಮಾಡಿದ ಬಳಿಕ ವೆಲ್ಲೂರು ಬಖಿಯಾತು ಸ್ವಾಲಿಹಾತ್‌ನಿಂದ ಬಾಖವಿ ಪದವಿ ಪಡೆದರು.
ಕಳೆದ ಮೂರು ದಶಕಗಳಿಂದ ಮಲಪ್ಪುರಂ ಜಿಲ್ಲೆಯ ಇರುಂಬು ಚೋಳ ಎಂಬಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಚನಿಕಾಡ್‌ನಲ್ಲೂ ದರ್ಸ್ ನಡೆಸಿದ್ದರು. ಮಂಕಡ, ಪಲ್ಲಿಪುರಂ ಮತ್ತು ಮಲಪ್ಪುರಂ ಚೆಮ್ಮಂಕಡವ್ ಖಾಝಿಯಾಗಿದ್ದರು.
ಸಮಸ್ತ ಮಲಪ್ಪುರಂ ಜಿಲ್ಲಾ ಮುಶಾವರ ಸದಸ್ಯರಾಗಿ, ಸಮಸ್ತ ಏರನಾಡ್ ತಾಲೂಕು ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಕಾಡೇರಿ ಮುಹಮ್ಮದ್ ಮುಸ್ಲಿಯಾರ್ 2021ರಲ್ಲಿ ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾಗಿದ್ದರು.