×
Ad

ಕಲ್ಲಡ್ಕ : ಅನುಗ್ರಹ ಮಹಿಳಾ ಕಾಲೇಜಿನಲ್ಲಿ ರಾಜಕೀಯ ನಾಯಕರೊಂದಿಗೆ ಸಂವಾದ

Update: 2025-08-09 20:31 IST

ಬಂಟ್ವಾಳ: ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜು ವತಿಯಿಂದ ರಾಜಕೀಯ ನಾಯಕರೊಂದಿಗೆ ಸಂವಾದ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.

ಮಾಜಿ ಸಚಿವರಾದ ಬಿ. ರಮನಾಥ ರೈ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುವುದು ಹಾಗೂ ಸಾರ್ವಜನಿಕವಾಗಿ ವಿವಿಧ ಸಂಘ–ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವುದು, ಯುವಜನರಲ್ಲಿ ರಾಜಕೀಯದತ್ತ ಆಸಕ್ತಿ ಮತ್ತು ಜಾಗೃತಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.

“ನಾವು ಸ್ವತಃ ಭ್ರಷ್ಟಾಚಾರದಿಂದ ದೂರವಿದ್ದು, ಭ್ರಷ್ಟಾಚಾರರಹಿತ ಹಾಗೂ ನೈತಿಕ ಮೌಲ್ಯಗಳನ್ನು ಪಾಲಿಸುವ ಅಧಿಕಾರಿಗಳಿಗೆ ಗೌರವ ನೀಡುವ ಮನೋಭಾವ ಬೆಳೆಸಬೇಕು” ಎಂದು ಸಲಹೆ ನೀಡಿದ ಅವರು ವಿಧಾನಸಭೆಯ ಕಾರ್ಯವಿಧಾನದ ಬಗ್ಗೆ ವಿವರಿಸುತ್ತಾ, “ಪ್ರಶ್ನಾವಧಿಯಲ್ಲಿ ಸಚಿವರು ಪೂರ್ವಸಿದ್ಧತೆ ಮಾಡಿಕೊಂಡು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಾರೆ. ಶೂನ್ಯ ಅವಧಿಯಲ್ಲಿ ಸದಸ್ಯರು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಸ್ಪೀಕರ್ ಮುಂದಿಡಲು ಅವಕಾಶವಿರುತ್ತದೆ” ಎಂದು ಹೇಳಿದರು.

ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ಕುರಿತಂತೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ, “ಭಾರತೀಯ ರಾಜಕೀಯ ಮತ್ತು ಆಡಳಿತದಲ್ಲಿ ಮಹಿಳೆಯರ ಪ್ರತಿನಿಧಿತ್ವ ಇನ್ನೂ ಅಪೂರ್ಣ. ಇದಕ್ಕೆ ಪ್ರಮುಖ ಕಾರಣ, ಮಹಿಳೆ ಯರು ರಾಜಕೀಯ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗದಿರುವುದು. ಆದರೆ ಭವಿಷ್ಯದಲ್ಲಿ ಪುರುಷರಂತೆಯೇ ಮಹಿಳೆಯರಿಗೂ ಸಮಾನ ಪ್ರತಿನಿಧಿತ್ವ ಲಭ್ಯವಾಗುವುದು ಅನಿವಾರ್ಯ” ಎಂದು ಅಭಿಪ್ರಾಯಪಟ್ಟರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಯಾಸಿನ್ ಬೇಗ್, ಉಪಾಧ್ಯಕ್ಷ ಮೊಹಮ್ಮದ್ ಇಸಾಕ್ ಮಂಗಳೂರು, ಸಂಚಾಲಕ ಅಮಾನುಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಇಮ್ಮರತ್ ಅಲಿ, ಪ್ರಾಂಶುಪಾಲೆ ಡಾ. ಹೇಮಲತಾ ಬಿ.ಡಿ., ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಡಳಿತ ಮಂಡಳಿಯ ಸದಸ್ಯರು, ಅಧ್ಯಾಪಕರ ವೃಂದ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News