ಕೆಎಂಸಿ 2020ರ ಚುನಾವಣೆ ತಡೆಯಾಜ್ಞೆ ರದ್ದು; ನ್ಯಾಯಕ್ಕಾಗಿ ಹೋರಾಟಕ್ಕೆ ಸಂದ ಜಯ: ಶ್ರೀನಿವಾಸ ಕಕ್ಕಿಲ್ಲಾಯ
ಶ್ರೀನಿವಾಸ ಕಕ್ಕಿಲ್ಲಾಯ
ಮಂಗಳೂರು : ಕರ್ನಾಟಕ ವೈದ್ಯಕೀಯ ಪರಿಷತ್ (ಕೆಎಂಸಿ)ಗೆ ಉಚ್ಚ ನ್ಯಾಯಾಲಯದ ಆದೇಶದಂತೆ 2020ರ ಜನವರಿ 23ರಂದು ನಡೆದ ಚುನಾವಣೆಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ರದ್ದುಗೊಳಿಸಿ, ಈ ಸಂಬಂಧ ಕಲ್ಬುರ್ಗಿ ವಿಭಾಗೀಯ ಪೀಠದಲ್ಲಿ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಪೀಠವು ಪುರಸ್ಕರಿಸಿ ಚುನಾವಣೆಯನ್ನು ಊರ್ಜಿತಗೊಳಿಸಿ ಆದೇಶಿಸಿದೆ.
ಈ ಆದೇಶವು ನ್ಯಾಯಕ್ಕಾಗಿ ಕಳೆದ ಒಂದು ದಶಕದಿಂದ ನಮ್ಮ ತಂಡ ನಡೆಸುತ್ತಿರುವ ಹೋರಾಟಕ್ಕೆ ಸಂದ ಜಯ ಎಂದು ಮಂಗಳೂರಿನ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯಿಸಿದ್ದಾರೆ.
ಏನಿದು ಪ್ರಕರಣ?
ಕೆಎಂಸಿಗೆ 2011 ಆಗಸ್ಟ್ ನಲ್ಲಿ ಚುನಾವಣೆ ನಡೆದಿತ್ತು. ಕರ್ನಾಟಕ ವೈದ್ಯಕೀಯ ನೋಂದಣಿ ಕಾಯಿದೆ 1961ರನುಸಾರ ಚುನಾವಣೆ ನಡೆದ ದಿನದಿಂದ 5 ವರ್ಷದಲ್ಲಿ ಅಂದರೆ, ಆಗಸ್ಟ್ 2016ಕ್ಕೆ ಚುನಾವಣೆ ನಡೆಯಬೇಕಿತ್ತು. ಈ ಬಗ್ಗೆ ಮಾಹಿತಿ ಕಾಯಿದೆಯಡಿ ಪ್ರಶ್ನಿಸಿದ್ದಾಗ ಅಧ್ಯಕ್ಷರು ಮತ್ತು ಸದಸ್ಯರು ತಾವು 2013ರಲ್ಲಿ ಅಧಿಕಾರಗ್ರಹಣ ಮಾಡಿದ್ದರಿಂದ 2018ಕ್ಕೆ ಚುನಾವಣೆ ನಡೆಸಲಾಗುವುದು ಎಂಬುದಾಗಿ ಪ್ರತಿಕ್ರಿಯಿಸಿದ್ದರು.
ಈ ವಿಳಂಬವನ್ನು ಪ್ರಶ್ನಿಸಿ ಸೆಪ್ಟೆಂಬರ್ 2016ರಲ್ಲಿ ಡಾ. ಶ್ರೀಕಾಂತ್ ಹೆಗ್ಡೆ, ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಡಾ. ರವೀಂದ್ರ ರಾಮಯ್ಯ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಚುನಾವಣೆಯನ್ನು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ಡಿಸೆಂಬರ್ 2018ರಲ್ಲಿ ಈ ಅರ್ಜಿಯನ್ನು ಪುರಸ್ಕರಿಸಿದ್ದ ಉಚ್ಚ ನ್ಯಾಯಾಲಯವು ಕೂಡಲೇ ಚುನಾವಣೆ ನಡೆಸಬೇಕೆಂದು ಆದೇಶಿಸಿತ್ತು. ಮತ್ತೆ 8 ತಿಂಗಳು ಕಳೆದರೂ ಚುನಾವಣೆ ನಡೆಸದಾಗ ಈ ವೈದ್ಯರ ತಂಡ ಮತ್ತೆ ನ್ಯಾಯಾಲಯದಲ್ಲಿ ನಿಂದನೆ ಅರ್ಜಿಯನ್ನು ದಾಖಲಿಸಿತು. ಡಿಸೆಂಬರ್ 2019ರಲ್ಲಿ ಉಚ್ಚ ನ್ಯಾಯಾಲಯದ ಆದೇಶದಂತೆ 2020ರ ಜನವರಿ 23ರಂದು ಚುನಾವಣೆ ನಡೆಸಲಾಯಿತು.
ಈ ಚುನಾವಣೆಯನ್ನು ಪ್ರಶ್ನಿಸಿ ಕೆಲವರು ಕಲ್ಬುರ್ಗಿ ಪೀಠದಲ್ಲಿ ಅರ್ಜಿ ಸಲ್ಲಿಸಿ ಚುನಾಯಿತರಾದ ಸದಸ್ಯರು ಅಧಿಕಾರ ವಹಿಸಿಕೊಳ್ಳದಂತೆ ತಡೆಯಾಜ್ಞೆ ತಂದಿದ್ದರು.
‘ಉಚ್ಚ ನ್ಯಾಯಾಲಯದ ಬೆಂಗಳೂರು ಪೀಠದ ಆದೇಶದಂತೆ ನಡೆದ ಚುನಾವಣೆಗೆ ಕಲ್ಬುರ್ಗಿ ಪೀಠದಲ್ಲಿ ತಡೆಯಾಜ್ಞೆ ನೀಡಿದ್ದನ್ನು ಪ್ರಶ್ನಿಸಿ ಕಲ್ಬುರ್ಗಿ ವಿಭಾಗೀಯ ಪೀಠದೆದುರು ಡಾ. ಸೋಮನಾಥ್ ಹಾಗೂ ಡಾ. ಮಧುಸೂದನ್ ಕಾರಿಗನೂರು ಅವರು ಮೇಲ್ಮನವಿ ಸಲ್ಲಿಸಿದ್ದರು. ಕೋವಿಡ್ ನಡುವೆ ಈ ಅರ್ಜಿಯ ವಿಚಾರಣೆ ವಿಳಂಬವಾಗಿತ್ತು. ಇಂದು (ನ. 23) ಅರ್ಜಿಯನ್ನು ಪುರಸ್ಕರಿಸಿ ಚುನಾವಣೆಗೆ ನೀಡಿದ್ದ ತಡೆಯಾಜ್ಞೆಯನ್ನು ರದ್ದು ಪಡಿಸಿ, ಚುನಾವಣೆಯನ್ನು ಊರ್ಜಿತಗೊಳಿಸಿ ನ್ಯಾಯಾಲಯವು ಆದೇಶಿಸಿದೆ. ನಮ್ಮ ಪರವಾಗಿ ವಕೀಲರಾದ ದೊರೆರಾಜ್ ವಾದಿಸಿದ್ದಾರೆ’ ಎಂದು ಶ್ರೀನಿವಾಸ ಕಕ್ಕಿಲ್ಲಾಯ ತಿಳಿಸಿದ್ದಾರೆ.
‘ಇದಲ್ಲದೆ, 2013ರಿಂದ ರಾಜ್ಯದ ವೈದ್ಯರು ತಮ್ಮ ನೋಂದಣಿಯನ್ನು ಮರು ನೋಂದಾಯಿಸಬೇಕೆಂದು ನ್ಯಾಯಬಾಹಿರ ವಾಗಿ ಕೆಎಂಸಿ ಹೇರಿದ್ದನ್ನು ಕೂಡ ನಾವು ವಿರೋಧಿಸಿದ್ದೆವು, ಒತ್ತಡಕ್ಕೆ ಬಗ್ಗದೆ ಮರುನೋಂದಣಿ ಮಾಡಿಕೊಳ್ಳದವರ ಹೆಸರುಗಳನ್ನು ದಾಖಲಾತಿಯಿಂದ ಅಳಿಸದಂತೆ ಉಚ್ಚ ನ್ಯಾಯಾಲಯದಿಂದ 2016-17ರಲ್ಲಿ ಹಲವು ಅರ್ಜಿಗಳ ಮೂಲಕ ತಡೆಯಾಜ್ಞೆ ಪಡೆದಿದ್ದೆವು’ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದಾರೆ.
‘2020ರ ಜನವರಿ 23ರಂದು ಚುನಾವಣೆ ನಡೆಯುವುದಕ್ಕೆ 3 ದಿನಗಳ ಮೊದಲು 5 ಸದಸ್ಯರನ್ನು ಆಗಿನ ಸರಕಾರವು ನಾಮನಿರ್ದೇಶನ ಮಾಡಿತ್ತು. ಹೀಗೆ ನಾಮನಿರ್ದೇಶನ ಮಾಡುವಾಗ ಚುನಾಯಿತರಲ್ಲಿ ಮಹಿಳೆಯರು, ಮತ್ತಿತರ ಜನವರ್ಗಗಳಿಗೆ ಸೇರಿದ ವೈದ್ಯರು ಇರದೇ ಇದ್ದಲ್ಲಿ ಅಂಥವರನ್ನು ಪರಿಗಣಿಸಬೇಕು ಎಂಬ ನಿಯಮವು ಕಾಯಿದೆ ಯಲ್ಲಿರುವುದನ್ನು ಕಡೆಗಣಿಸಲಾಗಿತ್ತು. ಇದನ್ನು ಕೂಡಾ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನಾನು ಪ್ರಶ್ನಿಸಿದ್ದು, ನ್ಯಾಯಾಲಯದ ಸೂಚನೆಯಂತೆ 2020 ಡಿಸೆಂಬರ್ ನಲ್ಲಿ ಈ ನಾಮ ನಿರ್ದೇಶನದ ಆದೇಶವನ್ನು ಕೂಡಾ ರದ್ದು ಮಾಡಲಾಗಿತ್ತು’ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ನ್ಯಾಯಾಂಗ ಹೋರಾಟದಲ್ಲಿ ಅರ್ಜಿದಾರರಾಗಿ ಹೋರಾಡಿದ್ದ ಡಾ. ರವೀಂದ್ರ ರಾಮಯ್ಯ, ಡಾ. ಶ್ರೀಕಾಂತ್ ಎನ್. ಹೆಗ್ಡೆ , ಡಾ. ಯೋಗಾನಂದ ರೆಡ್ಡಿ, ಡಾ. ಸೋಮನಾಥ್, ಡಾ. ಹೊನ್ನೇಗೌಡ, ಡಾ. ಮಧುಸೂದನ ಕಾರಿಗನೂರು ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುವುದಾಗಿ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದ್ದಾರೆ.
ಪ್ರಸಕ್ತ ಆದೇಶದ ಪ್ರಕಾರ 2020ರ ಜನವರಿ 23ರಂದು ನಡೆದ ಚುನಾವಣೆಯಲ್ಲಿ ಚುನಾಯಿತರಾದ ಸದಸ್ಯರು ಹೊಸದಾಗಿ ಪರಿಷತ್ತಿನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಈ ಕೆಳಗಿನ ತುರ್ತು ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಆಗ್ರಹಿಸಿದ್ದಾರೆ.
1.2016ರಿಂದ ನ್ಯಾಯಬಾಹಿರವಾಗಿ ಮಾಡಿರುವ ಎಲ್ಲಾ ಮರುನೋಂದಣಿಗಳನ್ನು ಪುನರ್ ಪರಿಶೀಲಿಸಿ ಸರಿಪಡಿಸುವುದು.
2. ಕೆಎಂಸಿಯನ್ನು ಮಾಹಿತಿ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ರಾಜ್ಯ ಮಾಹಿತಿ ಆಯೋಗದಿಂದ ಪಡೆದಿರುವ ಆದೇಶವನ್ನು ಪುನರ್ ವಿಮರ್ಶಿಸಿ ರದ್ದು ಪಡಿಸುವುದು, ಕೆಎಂಸಿಯನ್ನು ಮತ್ತೆ ಮಾಹಿತಿ ಕಾಯಿದೆಯ ವ್ಯಾಪ್ತಿಗೆ ತರುವುದು.
3. ಕಳೆದ 10 ವರ್ಷಗಳಲ್ಲಿ ಕೆಎಂಸಿಯ ಆಯವ್ಯಯವನ್ನು ತನಿಖೆಗೊಳಪಡಿಸಿ ಪ್ರಕಟಿಸುವುದು.
4. ಕಿರಿಯ ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಯ ನಿಯಮವನ್ನು ರಾಜ್ಯ ಸರಕಾರವು ಹಿಂಪಡೆದಿರುವುದರಿಂದ ಆ ನಿಯಮದ ನೆಪದಲ್ಲಿ ಈ ವರೆಗೆ ಕೆಎಂಸಿಯು ಅಫಿಡವಿಟ್ ಪಡೆಯುತ್ತಿದ್ದ ಕ್ರಮವನ್ನು ಕೂಡಲೇ ನಿಲ್ಲಿಸುವುದು.