×
Ad

ಕೊಣಾಜೆ | ಪಿ.ಎ.ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಟೆಕ್ನೋ-ಕಲ್ಚರಲ್ ಫೆಸ್ಟ್ ಉದ್ಘಾಟನೆ

ಜಗತ್ತಿನಲ್ಲಿ ತಂತ್ರಜ್ಞಾನಗಳ ಪ್ರಭಾವ ಹೆಚ್ಚುತ್ತಿವೆ : ಅಬ್ದುಲ್ ರಾಝಿಕ್ ಆಲಿ

Update: 2025-11-27 15:34 IST

ಕೊಣಾಜೆ: ಇದು ತಂತ್ರಜ್ಞಾನದ ಯುಗವಾಗಿದೆ. ಆಧುನಿಕತೆಯೊಂದಿಗೆ ಕೃತಕ ಬುದ್ದಿಮತ್ತೆ, ರೋಬೋಟಿಕ್ ಮೊದಲಾದ ತಂತ್ರಜ್ಞಾನಗಳ ಕಾರ್ಯವ್ಯಾಪ್ತಿ ವಿಶಾಲವಾಗಿ, ವೇಗವಾಗಿ ಬೆಳವಣಿಗೆಯನ್ನು ಕಾಣುತ್ತಿವೆ. ಆದ್ದರಿಂದ ಯುವ ಸಮುದಾಯ ಶಿಕ್ಷಣದೊಂದಿಗೆ‌ ಕೌಶಲ್ಯ, ಸೃಜನಶೀಲತೆಯ ಮೂಲಕ ತಂತ್ರಜ್ಞಾನ ಯುಗಕ್ಕೆ ಪೂರಕವಾಗಿ ಬೆಳೆಯಬೇಕಿದೆ ಎಂದು ರಾಸಾಫ್ಟ್ ಇನ್ಫೋಟೆಕ್ ನ ಸ್ಥಾಪಕರು ಹಾಗೂ ಸಿಇಒ ಅಬ್ದುಲ್ ರಾಝಿಕ್ ಆಲಿ ಅವರು ಹೇಳಿದರು.

ಅವರು ಕೊಣಾಜೆಯ ಪಿ.ಎ. ಎಂಜಿನಿಯರಿಂಗ್ ಕಾಲೇಜು ಮಂಗಳೂರು, ತನ್ನ ಸಿಲ್ವರ್ ಜುಬಿಲಿ ಸಂಭ್ರಮ ಅಂಗವಾಗಿ, ಕೋ-ಸ್ಕೋಲಾಸ್ಟಿಕ್ ಅಕ್ಟಿವಿಟಿ ಕ್ಲಬ್ ಮೂಲಕ ರಾಷ್ಟ್ರಮಟ್ಟದ ಟೆಕ್ನೋ-ಕಲ್ಚರಲ್ ಸ್ಪರ್ಧೆ “ ಪಿಎಸಿಇ ಕನೆಕ್ಟ್ 2K25 – ಟೆಕ್ ದ ಸ್ಟೇಜ್, ಕಲ್ಚರ್ ದ ಬೀಟ್” ಕಾರ್ಯಕ್ರಮವನ್ನು ಗುರುವಾರದಂದು ಉದ್ಘಾಟಿಸಿ ಮಾತನಾಡಿದರು.

ಇಂದಿನ ವೇಗದ, ಸ್ಪರ್ಧಾತ್ಮಕ ಕಾಲದಲ್ಲಿ ಸಮಾಜವನ್ನು ಅರ್ಥ ಮಾಡಿಕೊಳ್ಳುವುದರೊಂದಿಗೆ ಜಗತ್ತಿನ ಪರಿವರ್ತನೆ, ತಂತ್ರಜ್ಞಾನದ ಪ್ರಭಾವಗಳು ಸೇರಿದಂತೆ ದೈನಂದಿನ ಆಗುಹೋಗುಗಳ ಬಗ್ಗೆ ಅರಿವನ್ನು‌ ಹೆಚ್ಚಿಸಿಕೊಂಡು ಸೃಜನಾತ್ಮಕವಾಗಿ ಮುನ್ನಡೆಯಬೇಕು. ಮಂಗಳೂರು ಮೌನವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ರಾಜ್ಯದ ಮುಂಚೂಣಿಯಯ ನಗರವಾಗಿ ರೂಪುಗೊಳ್ಳಲಿದ್ದು, ಉದ್ಯೋಗಾವಕಾಶಗಳು ಹೆಚ್ಚಲಿದೆ ಎಂದರು.

ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ‌ ಡಾ.ರಮೀಸ್ ಎಂ.ಕೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಭಾರತ ಅತ್ಯಧಿಕ ಯುವ ಸಮುದಾಯವನ್ನು ಹೊಂದಿರುವ ರಾಷ್ಟ್ರ. ಶಿಕ್ಷಣದ ಅಧ್ಯತೆಯೊಂದಿಗೆ ಆಧುನಿಕ ತಂತ್ರಜ್ಞಾನ, ಅವಕಾಶಗಳ ಬಗ್ಗೆ ಅರಿತುಕೊಂಡು ಮುನ್ನಡೆದರೆ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ. ಇಂತಹ ತಂತ್ರಜ್ಞಾನಾಧಾರಿತ ಸ್ಪರ್ಧೆಗಳು ನಮ್ಮಲ್ಲಿ ಹೊಸ ಹುರುಪು ಮೂಡಿಸುತ್ತದೆ ಎಂದರು.

ಪಿ.ಎ.ಎಜ್ಯುಕೇಶನ್ ಟ್ರಸ್ಟ್ ನ ಕ್ಯಾಂಪಸ್ ಎಜಿಎಂ ಸರ್ಫುದ್ದೀನ್, ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ.ಶರ್ಮಿಳಾ ಕುಮಾರಿ, ಪಿ.ಎ.ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರ್ಫ್ರಾಝ್ ಹಾಸಿಂ, ಡೀನ್ ಡಾ.ಸಯ್ಯದ್ ಅಮೀನ್ ಅಹ್ಮದ್, ಪರ್ಚೇಸ್ ಮ್ಯಾನೇಜರ್ ಡಾ.ಹಾರಿಸ್ ಟಿ.ಡಿ, ಅಡ್ಮಿಶನ್ ಆಫಿಸರ್ ಶಫಿನಾಝ್ ಸೈಯದ್ ಇಸ್ಮಾಯಿಲ್ ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮ ಸಂಯೋಜಕರಾದ ಪ್ರೊ.ಇಸ್ಮಾಯಿಲ್ ಶಾಫಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕಿ ಅಂಕಿತಾ ಬೇಕಲ್ ವಂದಿಸಿದರು. ಫಾದಿಲ್ ಪ್ರಾರ್ಥಿಸಿದರು. ರುಷದಾ ಫಾತಿಮ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಒಂದು ವಿಭಾಗದಲ್ಲಿ ಟೆಕ್ನಿಕಲ್ ಕ್ವಿಜ್, ಸೈನ್ಸ್ ಮಾದರಿ ತಯಾರಿ, ಟೆಕ್ನಿಕಲ್ ರಂಗೋಲಿ ಮತ್ತು ಪೋಸ್ಟರ್ ತಯಾರಿ ಸ್ಪರ್ಧೆಗಳು ನಡೆದರೆ ಇನ್ನೊಂದು ವಿಭಾಗದಲ್ಲಿ ಹಾಡು, ಮುಖ ಚಿತ್ರಕಲೆ, ಮೈಮ್ ಮತ್ತು ಸ್ಕೆಚಿಂಗ್ ಸ್ಪರ್ಧೆಯು ನಡೆಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News