ಕೊಣಾಜೆ | ಘನ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಸುಸ್ಥಿರ ಸ್ವಚ್ಛತೆಗೆ ವಿಶೇಷ ಕಾರ್ಯಾಚರಣೆ : ಯು.ಟಿ.ಖಾದರ್
ಕೊಣಾಜೆ: ಮಂಗಳೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಪ್ರದೇಶಗಳ ಕುಡಿಯುವ ನೀರು, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಸುಸ್ಥಿರ ಸ್ವಚ್ಛತೆಯ ಕಾರ್ಯ ಸಾಧನೆಗೆ ಸ್ಪಷ್ಟ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಶೀಘ್ರದಲ್ಲೇ ವಿಶೇಷ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷರು ಹಾಗೂ ಮಂಗಳೂರು ವಿಧಾನ ಸಭಾ ಕ್ಷೇತ್ರ ಶಾಸಕರಾದ ಯು.ಟಿ ಖಾದರ್ ತಿಳಿಸಿದ್ದಾರೆ.
ಅವರು ಮುಡಿಪು ಜನ ಶಿಕ್ಷಣ ಟ್ರಸ್ಟ್ ನಲ್ಲಿ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ವತಿಯಿಂದ ನಡೆಯುತ್ತಿರುವ 28ನೇ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ರೋಗ ಮುಕ್ತ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಸ ಮುಕ್ತ ಮಾಲಿನ್ಯ ಮುಕ್ತ ಸ್ವಚ್ಚ ಪರಿಸರ ಅತೀ ಅಗತ್ಯ. ಈ ದಿಸೆಯಲ್ಲಿ ಜನ ಶಿಕ್ಷಣ ಟ್ರಸ್ಟ್ ನ ನಿರಂತರ ಸುಸ್ಥಿರ ಸ್ವಚ್ಛತಾ ಕ್ರಿಯಾತ್ಮಕ ಅರಿವಿನ ಅಭಿಯಾನ ಮತ್ತು ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಯ ಉಚಿತ ನಿರಂತರ ಆರೋಗ್ಯ ಶಿಬಿರಗಳು ಸುಸ್ಥಿರ ಸ್ವಚ್ಛ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದರು.
ಗ್ರಾಮಾಡಳಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಂಘ ಸಂಸ್ಥೆ ಸಮುದಾಯದ ಸಹಯೋಗದಲ್ಲಿ ಕಸ ಮುಕ್ತ ಗ್ರಾಮ, ಕಸ ಮುಕ್ತ ಕರ್ನಾಟಕ, ವಿಶೇಷ ಕಾರ್ಯಾಚರಣೆ ಉಳ್ಳಾಲ ತಾಲೂಕಿನಿಂದ ಆರಂಭಿಸಲು ಕಾರ್ಯ ಯೋಜನೆ ಬಗ್ಗೆ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ವಚ್ಚ ಮನೆ ಸ್ವಯಂ ಘೋಷಣೆ ಪತ್ರ ನಮೂನೆ ಬಿಡುಗಡೆಗೊಳಿಸಿ ಕಸ ಮುಕ್ತ ಕಾರ್ಯಾಚರಣೆ ಆರಂಭಿಸಿರುವ ಮುನ್ನೂರು ಗ್ರಾ.ಪಂ ಪ್ರತಿ ನಿಧಿಗಳಿಗೆ ಹಸ್ತಾಂತರಿಸಲಾಯಿತು. ಡಾ.ಅನೂಪ್, ಡಾ.ಶ್ಯಾಮ್ ಸುಂದರ್ ಮತ್ತು ವೈದ್ಯಕೀಯ ತಂಡದವರು ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.
ತಾ.ಪಂ. ಮಾಜಿ ಸದಸ್ಯ ಹೈದರ್ ಕೈರಂಗಳ, ಪಂ. ಸದಸ್ಯರಾದ ಅಬ್ದುಲ್ ರಹಿಮಾನ್, ಸೆಮೀಮ, ಮುರಳಿ, ಉದ್ಯಮಿ ಜಲೀಲ್ ಮೋಂಟುಗೋಳಿ, ಯೋಗ ಶಿಕ್ಷಕ ಜಗದೀಶ್ ಆಚಾರ್ಯ, ಇಸ್ಮಾಯಿಲ್ ಕಣಂತೂರು, ಶಂಕರಿ ಭಟ್, ರಂಜನಿ ಮೊದಲಾದವರು ಉಪಸ್ಥಿತರಿದ್ದರು