ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಕಾರ್ಮಿಕ ಕಾನೂನುಗಳು ಬಲಿ: ವಸಂತ ಆಚಾರಿ
ಮಂಗಳೂರು, ಜ.27: ದೇಶವನ್ನಾಳುವ ಕೇಂದ್ರ ಸರಕಾರ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಕಾಪಾಡುವ ಮೂಲಕ ಕಾರ್ಮಿಕ ಕಾನೂನುಗಳನ್ನು ಬಲಿತೆಗೆದುಕೊಂಡಿದೆ ಎಂದು ಸಿಐಟಿಯು ದ.ಕ ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಹೇಳಿದ್ದಾರೆ.
ಕಾರ್ಮಿಕ ಸಂಹಿತೆಗಳ ವಿರುದ್ದ ಮೂಡಬಿದ್ರೆಯಿಂದ ಮಂಗಳೂರಿಗೆ ಸಂಚರಿಸಲಿರುವ ಪಾದಯಾತ್ರೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ನರೇಂದ್ರ ಮೋದಿ ಸರಕಾರ ಸರಕಾರಿ ಬಂಡವಾಳ, ಸಾರ್ವತ್ರಿಕ ರಂಗಗಳು, ವಿಮಾರಂಗ ಎಲ್ಲವನ್ನು ಖಾಸಗೀ ಕಂಪನಿಗಳಿಗೆ ಮಾರಾಟ ಮಾಡಿದೆ ಎಂದರು.
ಕಾರ್ಪೋರೇಟ್ ಸಂಸ್ಥೆಗಳಿಗಾಗಿ ದೇಶದ 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4 ಸಂಹಿತೆ ಗಳನ್ನಾಗಿ ರೂಪಿಸುವ ಮೂಲಕ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಿದೆ. ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದೆ. ಸಾಮಾಜಿಕ ಭದ್ರತೆ ಕನಸಿನ ಮಾತಾಗುತ್ತಿದೆ ಎಂದು ನುಡಿದರು.
ಕೇರಳ ರಾಜ್ಯ ಸರಕಾರ ಪರ್ಯಾಯ ಕಾರ್ಯಕ್ರಮವನ್ನು ಸಂಹಿತೆಗಳ ವಿರುದ್ಧ ನೀಡಿದೆ. ಆದರೆ ಸಿದ್ದರಾಮಯ್ಯ ಸರಕಾರ ಬಿಜೆಪಿ ಕೇಂದ್ರ ಸರಕಾರದ ನೀತಿಗಳ ಪರವಾಗಿ ನಿಯಮಾಳಿಯ ಕರಡು ತಯಾರಿಸಿ ಎಂದು ನುಡಿದರು.
ರೈತಸಂಘದ ಜಿಲ್ಲಾಧ್ಯಕ್ಷ ಕೆ ಯಾದವ ಶೆಟ್ಟಿ ಮಾತನಾಡಿ ಕೇಂದ್ರ ಸರಕಾರ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ನಾಶಗೈಯುತ್ತಿದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳ್ಳುತ್ತಿದೆ. ಬೀಜ ನೀತಿ ರೈತರಿಗೆ ಮಾರಕವಾಗಿದೆ ಎಂದು ಹೇಳಿದರು.
ಉದ್ಘಾಟಕರಾದ ವಸಂತ ಆಚಾರಿಯವರು ಜಾಥಾ ತಂಡದ ನಾಯಕರಾದ ರಾಧಾ ಮತ್ತು ನೋಣಯ ಗೌಡರಿಗೆ ಕೆಂಬಾವುಟವನ್ನು ಹಸ್ತಾಂತರಿಸಿದರು.
ಪಾದಯಾತ್ರೆಯ ನೇತೃತ್ವವನ್ನು ಸಿಐಟಿಯು ಮುಂದಾಳುಗಳಾದ ಸದಾಶಿವದಾಸ್, ಗಿರಿಜ, ಶಂಕರ, ವಸಂತಿ, ಭವ್ಯ ಮುಚ್ಚೂರು, ಲಕ್ಷ್ಮೀ , ಕೃಷ್ಣಪ್ಪ, ಹೊನ್ನಯ್ಯ, ಬಾಬು ಪೂಜಾರಿ, ಕೃಷ್ಣಪ್ಪ ಪೂಜಾರಿ, ಬೇಬಿ, ಪದ್ಮಾವತಿ, ಲತಾ ಮತ್ತು ರಕ್ಷಾರವರು ವಹಿಸಿದ್ದರು. ರಮಣಿ ಸ್ವಾಗತಿಸಿದರು.