ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆ: ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳದ್ದೇ ಚರ್ಚೆ
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ ಯಲ್ಲಿ ದಾರಿ ದೀಪ ಕೊರತೆ, ಗೂಡಂಗಡಿ ತೆರವು ವಿಚಾರದಲ್ಲಿ ವ್ಯಾಪಕ ಚರ್ಚೆ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆ ಯಲ್ಲಿ ನಡೆಯಿತು.
ಪುರಸಭೆ ಅಧ್ಯಕ್ಷ ಕಮಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡನೆ ಮಾಡಿದ ಸಲಾಮ್ ಉಚ್ಚಿಲ ಅವರು ಕೇರಳದಲ್ಲಿ ತಲಪಾಡಿ ಯಿಂದ ಕಾಸರಗೋಡು ವರೆಗೆ ಸುಸಜ್ಜಿತ ದಾರಿ ದೀಪ, ರಸ್ತೆ ಇದೆ. ತಲಪಾಡಿಯಿಂದ ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಯಲ್ಲಿ ದಾರಿ ದೀಪ, ಸುಸಜ್ಜಿತ ವ್ಯವಸ್ಥೆ ಎಲ್ಲಿದೆ ಎಂದು ಪ್ರಶ್ನಿಸಿದ ಅವರು ಈ ಸಮಸ್ಯೆ ಶೀಘ್ರ ಕ್ರಮ ಆಗಬೇಕು ಎಂದು ಹೆದ್ದಾರಿ ಇಲಾಖೆ ಸಿಬ್ಬಂದಿ ಗಳನ್ನು ಒತ್ತಾಯಿಸಿದರು.
ರಾಷ್ಟ್ರೀಯ ಹೆದ್ದಾರಿ ಯಲ್ಲಿ ಇರುವ ಗೂಡಂಗಡಿ ತೆರವು ಮಾಡುವ ಕೆಲಸ ಆಗಬೇಕು. ದಾರಿದೀಪ ಸಹಿತ ಮೂಲ ಭೂತ ವ್ಯವಸ್ಥೆಗಳು ಆಗಬೇಕು ಎಂದು ಉಪಾಧ್ಯಕ್ಷ ರವಿಶಂಕರ್ ತಿಳಿಸಿದರು.
ಡಿಮಾರ್ಟ್ ನಿರ್ಮಾಣ ಆಗುವ ಕುಂಪಲ ಬೈಪಾಸ್ ನಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಅಂಬಿಕಾ ರೋಡ್,ಅಡ್ಕಾ, ಕೊಲ್ಯ ಸಹಿತ ಕೆಲವು ಕಡೆ ದಾರಿದೀಪ ಇಲ್ಲ ಇದಕ್ಕೆ ಪರಿಹಾರ ಒದಗಿಸಿ. ಈ ಬಗ್ಗೆ ಸಿಬ್ಬಂದಿ ಗಳನ್ನು ತರಾಟೆಗೈದರೆ ಕೆಲಸ ಆಗದು. ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗ್ಗೆ ವರದಿ ಸಂಗ್ರಹಿಸಿ ಹೆದ್ದಾರಿ ಇಲಾಖೆ ಗೆ ಲಿಖಿತ ರೂಪದಲ್ಲಿ ನೀಡಿದರೆ ಕೆಲಸ ಆಗಬಹುದು ಎಂದು ಮನೋಜ್ ತಿಳಿಸಿದರು. ಇದಕ್ಕೆ ದೀಪಕ್ ಪಿಲಾರ್ ಧ್ವನಿ ಗೂಡಿಸಿದರು.
ಉಚ್ಚಿಲ ಸೇತುವೆ ಬಳಿ ವ್ಯಾಪಾರಿಯೊಬ್ಬರು ಥರ್ಮಾಕೋಲ್ ರಸ್ತೆ ಬದಿ ಹಾಕಿದ್ದಾರೆ. ಅವರಿಗೆ ಎರಡು ಬಾರಿ ನೋಟೀಸ್ ಮಾಡಲಾಗಿದೆ. ಮೂರನೆ ನೋಟೀಸ್ ಇಲ್ಲ ಈ ಬಗ್ಗೆ ಕ್ರಮ ಆಗಬೇಕು ಎಂದು ಸದಸ್ಯರೊಬ್ಬರು ಒತ್ತಾಯಿಸಿದರು. ಈ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಮತ್ತಡಿ ಹೇಳಿದರು.
ಉಪಾಧ್ಯಕ್ಷ ರವಿಶಂಕರ್ ಅವರು ಸಭೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಬಿಟ್ಟು ಉಳಿದ ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ.ಎರಡು ಇಲಾಖೆಯವರು ಮಾತ್ರ ಕರೆ ಮಾಡಿ ಕಾರಣ ನೀಡಿದ್ದಾರೆ ಎಂದು ಸಭೆಗೆ ತಿಳಿಸಿದಾಗ ಈ ಬಗ್ಗೆ ಚರ್ಚೆ ನಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಂಕರಿ ಅವರು ಇಲಾಖೆಗೆ ಸಂಬಂಧಿಸಿದ ಕೆಲವು ಮಾಹಿತಿ ಗಳನ್ನು ಸಭೆಗೆ ತಿಳಿಸಿದರು. ಪುರಸಭೆಯಲ್ಲಿ ಈಗ 116 ಮನೆಗಳು ಬಿ ಖಾತೆಯಲ್ಲಿದೆ. ಇದನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಂಗಲ್ ಸೈಟ್ ಮಾಡಿ ಎ ಖಾತೆ ಮಾಡಿಸಬೇಕು ಎಂದು ಕಂದಾಯ ಅಧಿಕಾರಿ ಪುರುಷೋತ್ತಮ ಸಭೆಗೆ ತಿಳಿಸಿದರು.
ಈ ಬಗ್ಗೆ ವರದಿ ತಯಾರಿಸಿ ಪ್ರಾಧಿಕಾರಕ್ಕೆ ನೀಡಬೇಕು.ಅವರು ಎ ಖಾತೆ ಮಾಡಿ ಕೊಡಲಿ ಎಂದು ಹರೀಶ್ ಹೇಳಿದರು.
ಕುಡಿಯುವ ನೀರಿನ ಪರಿಷ್ಕರಿಸಿ ದರ ಏರಿಕೆ ಮಾಡುವ ಬಗೆ ಮುಖ್ಯಾಧಿಕಾರಿ ಮತ್ತಡಿ ಮಂಡಿಸಿದಾಗ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಬೇರೆ ಪಂಚಾಯತ್ ಗಳಲ್ಲಿ ನೀರಿನ ದರ ತಿಂಗಳಿಗೆ 160 ಆಗಿದೆ.ನಾವು ಪರಿಷ್ಕರಣೆ ಮಾಡಬೇಕು. ಮುಂದಿನ ಅವಧಿಯಲ್ಲಿ ನೀರಿನ ದರ 125, ವಾಣಿಜ್ಯ ವಿಭಾಗಕ್ಕೆ 300 ಮಾಡೋಣ ಎಂದು ಮುಖ್ಯಾಧಿಕಾರಿ ಮತ್ತಡಿ ಹೇಳಿದರು. ಈ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ಸಭೆಯಲ್ಲಿ ಮುಖ್ಯಾಧಿಕಾರಿ ಮತ್ತಡಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.