×
Ad

ಮಾಜಿ ಸಚಿವ ರಮಾನಾಥ ರೈ ಕ್ಷಮೆ ಯಾಚಿಸುವಂತೆ ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಶೇಟ್ ಆಗ್ರಹ

Update: 2026-01-22 18:55 IST

ಮಂಗಳೂರು: ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿಯವರು ಸಂಪ್ರದಾಯಿಕವಾಗಿ ಭಗವಾಧ್ವಜ ಹಾರಿಸಿರುವುದನ್ನು ಅಪಹಾಸ್ಯ ಮಾಡುವ ಮೂಲಕ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಹಿಂದೂಗಳಿಗೆ ಅವಮಾನ ಮಾಡಿದ್ದಾರೆ, ಅವರು ಕೂಡಲೇ ಈ ವಿಚಾರದಲ್ಲಿ ಕ್ಷಮೆ ಯಾಚಿಸುವಂತೆ ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಶೇಟ್ ಆಗ್ರಹಿಸಿದ್ದಾರೆ.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅರುಣ್ ಶೇಟ್ ಅವರು, ರಮಾನಾಥ ರೈ ಅವರಂತಹ ಹಿರಿಯ ರಾಜಕಾರಣಿಯಿಂದ ಇಂತಹ ಹೇಳಿಕೆಯನ್ನು ಯಾರೂ ನಿರೀಕ್ಷಿಸುವಂತಿಲ್ಲ. ಆದರೆ ಅವರು ರಾಜಕೀಯ ತೆವಳಿಗೋಸ್ಕರ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದರು. ದೇವಸ್ಥಾನದಲ್ಲಿ ಭಗವಧ್ವಜ ಹಾರಿಸಬಾರದು ಎಂದು ಹೇಳಿದರೆ ಮತ್ತೆ ಎಲ್ಲಿ ಹಾರಿಸಬೇಕು ಎಂದು ಪ್ರಶ್ನಿಸಿದರು.

ಸರಕಾರಿ ಕಾರ್ಯಕ್ರಮದಲ್ಲಿ ಭಗವಾಧ್ವಜ ಹಾರಿಸಿದರೆ ತಪ್ಪು. ಧಾರ್ಮಿಕ ಕಾರ್ಯಕ್ರಮದಲ್ಲಿ ಹಾರಿಸುವುದು ತಪ್ಪಲ್ಲ ಎಂದು ನುಡಿದರು.

ಮುಸ್ಲಿಮರ ಧಾರ್ಮಿಕ ಕಾರ್ಯಕ್ರಮದಲ್ಲಿ ಡಿಸಿ ಧ್ವಜ ಹಾರಿಸಿದರೆ ನೀವು ಅದನ್ನು ಸಮರ್ಥಿಸುತ್ತೀರಾ ಎಂದು ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಅರುಣ್ ಶೇಟ್ ಸ್ಪಷ್ಟ ಉತ್ತರ ನೀಡಲಿಲ್ಲ. ದ್ವೇಷ ಭಾಷಣ ಆರೋಪದಲ್ಲಿ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರ ಮೇಲೆ ಎಫ್‌ಐಆರ್ ಆಗಿದೆ. ಇದರಿಂದ ನಾವೇನು ಹೆದರುವುದಿಲ್ಲ. ಇದು ಸದಾ ಸುದ್ದಿಯಲ್ಲಿರಬೇಕೆಂಬ ಪ್ರಯತ್ನವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಮುಖರಾದ ವಸಂತ ಜೆ ಪೂಜಾರಿ , ಸುಜಿತ್ ಪ್ರತಾಪ್ , ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News