×
Ad

ಮಂಗಳೂರು: 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2024-02-25 18:16 IST

ಮಂಗಳೂರು: ಹದಿನಾರು ವರ್ಷಗಳ ಹಿಂದೆ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಾದಕ ದ್ರವ್ಯ ಮತ್ತು ಗಾಂಜಾ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ತೆಕ್ಕೇಲ್‌ನ ಟಿ.ಇ. ಜೋಸೆಫ್ (58) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಜೋಸೆಫ್ ವಿರುದ್ಧ 2008ರಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದ ವಿವಿಧ ಠಾಣೆಗಳಲ್ಲಿ ಜೋಸೆಫ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿ ಜೋಸೆಫ್ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ನ್ಯಾಯಾಲಯವು ದಸ್ತಗಿರಿ ವಾರೆಂಟನ್ನು ಹೊರಡಿಸಿತ್ತು.

ಆರೋಪಿ ಟಿ.ಇ. ಜೋಸೆಫ್ ಕೇರಳದ ತ್ರಿಶೂರ್‌ನ ಮುಕುಂದಪುರಂನಲ್ಲಿ ಇದ್ದಾನೆ ಎಂಬ ಸುಳಿವು ದೊರೆತ ಹಿನ್ನೆಲೆಯಲ್ಲಿ ಈತನ ಪತ್ತೆಗೆ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷರಾದ ಅನಂತ ಪದ್ಮ ನಾಭ ಇವರ ಮಾರ್ಗದರ್ಶನದಲ್ಲಿ ಎಎಸ್‌ಐ ಅಶೋಕ್, ಎಚ್.ಸಿ , ವಿಜಯ ಸುವರ್ಣ ಎಚ್.ಸಿ ಲೋಕೇಶ್ ಹಾಗೂ ಇತರ ಸಿಬ್ಬಂದಿಯನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಪೊಲೀಸರ ತಂಡ ತ್ರಿಶೂರ್‌ಗೆ ತೆರಳಿ ಜೋಸೆಫ್‌ನ ಇರುವಿಕೆ ಯನ್ನು ಪತ್ತೆಹಚ್ಚಿ ವಶಕ್ಕೆ ತೆಗದುಕೊಂಡರು.

ಆರೋಪಿ ಜೋಸೆಫ್‌ನನ್ನು ಮಂಗಳೂರಿನ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News