×
Ad

ಮಂಗಳೂರು: ಕಾರ್ಮಿಕರ ಮಧ್ಯೆ ಹೊಡೆದಾಟ; ಗಾಯಾಳು ಮೃತ್ಯು

Update: 2023-12-29 20:33 IST

ಮಂಗಳೂರು: ನಗರದ ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣದ ಬಳಿ ಇಬ್ಬರು ಕೂಲಿ ಕಾರ್ಮಿಕರ ಮಧ್ಯೆ ನಡೆದ ಹೊಡೆದಾಟದಲ್ಲಿ ಗಂಭೀರ ಗಾಯಗೊಂಡ ಕಾರ್ಮಿಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗುರುವಾರ ನಡೆದಿರುವುದಾಗಿ ವರದಿಯಾಗಿದೆ.

ಕಲ್ಲಡ್ಕ ನಿವಾಸಿ ಜಯರಾಮ ಪೂಜಾರಿ (52) ಮೃತಪಟ್ಟ ವ್ಯಕ್ತಿ. ಕೂಲಿ ಕಾರ್ಮಿಕ ಜಯರಾಮ 3 ವರ್ಷದಿಂದ ಹಂಪನಕಟ್ಟೆ ಆಸುಪಾಸಿನ ಬಸ್ ತಂಗುದಾಣ, ಹೂವಿನ ಮಾರ್ಕೆಟ್ ಬಳಿ ಮಲಗುತ್ತಿದ್ದರು. ಬುಧವಾರ ರಾತ್ರಿ ಸುಮಾರು 8:30ರ ವೇಳೆಗೆ ಜಯರಾಮ ಹೂವಿನ ಕಟ್ಟೆ ಬಳಿ ನಿಂತಿದ್ದಾಗ ಅಲೆಮಾರಿ ಕೂಲಿ ಕಾರ್ಮಿಕ ದಂಪತಿಯು ಈ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಹಿಳೆಯ ಬಳಿ ಜಯರಾಮ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಮಹಿಳೆ ಮತ್ತಾಕೆಯ ಪತಿ ಜಯರಾಮನ ಮೇಲೆ ಹಲ್ಲೆ ನಡೆಸಿದಾಗ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಜಯರಾಮನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಸೆರೆ: ಹಲ್ಲೆ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜಯರಾಮ ಗಂಭೀರ ಗಾಯಗೊಂಡು ನೆಲಕ್ಕೆ ಉರುಳಿ ಬಿದ್ದ ಬಳಿಕ ಆರೋಪಿ ದಂಪತಿ ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆ ನಡೆದ ಸುತ್ತಮುತ್ತಲ ಪ್ರದೇಶದ ಸಿಸಿ ಕ್ಯಾಮರಾವನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆರೋಪಿಗಳ ವಿರುದ್ಧ ಬಂದರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News