×
Ad

ಮಂಗಳೂರು ಮನಪಾ | ಕಸ ಸಂಗ್ರಹಕ್ಕೆ ವಿದ್ಯುತ್ ಚಾಲಿತ ಆಟೋಗಳ ಲೋಕಾರ್ಪಣೆ

Update: 2024-06-19 16:12 IST

ಮಂಗಳೂರು, ಜೂ.19: ಮಂಗಳೂರು ಮಹಾನಗರ ಪಾಲಿಕೆ ಮತ್ತು ಪ್ರಗ್ಯಾ ಆಟೋಮೊಬೈಲ್ಸ್ ಸಹಭಾಗಿತ್ವದಲ್ಲಿ ಮನಪಾ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಕ್ಕೆ ವಿದ್ಯುತ್ ಚಾಲಿತ ಆಟೋಗಳ ಲೋಕಾರ್ಪಣೆ ಕಾರ್ಯಕ್ರಮ ನಗರದ ಪುರಭವನದ ಆವರಣದಲ್ಲಿ ಬುಧವಾರ ನಡೆಯಿತು.

ಬೆಂಗಳೂರಿನ ಪ್ರಗ್ಯಾ ಆಟೋಮೊಬೈಲ್ಸ್ ತಯಾರಿಸಿದ 24 ಪರಿಸರ ಸ್ನೇಹಿ, ಮಾಲಿನ್ಯರಹಿತ ವಾಹನಗಳನ್ನು ಪೌರ ಕಾರ್ಮಿಕರಿಗೆ ನೀಡಲಾಯಿತು.

ಕಸ ಸಂಗ್ರಹ ವಾಹನಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಂಸದ ಬ್ರಿಜೇಶ್ ಚೌಟ, ವಿದ್ಯುತ್ ಚಾಲಿತ ವಾಹನ ಸ್ವಚ್ಛ ಮಂಗಳೂರಿನ ಜತೆಗೆ ಹಸಿರು ಮಂಗಳೂರು ಪರಿಕಲ್ಪನೆ ಸಾಕಾರಕ್ಕೆ ಪೂರಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಯೋಜನೆಯಂತೆ ಪ್ರಗ್ಯಾ ಆಟೋಮೊಬೈಲ್ಸ್ ಕಸ ಸಂಗ್ರಹ ವಾಹನ ಒದಗಿಸಿದೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕಸ ಸಂಗ್ರಹಕ್ಕೆ ಇಲೆಕ್ಟ್ರಿಕ್ ಚಾಲಿತ ವಾಹನಗಳ ಬಳಕೆ ರಾಜ್ಯದಲ್ಲೇ ವಿನೂತನ ಯೋಜನೆಯಾಗಿದೆ. ಮೊದಲ ಹಂತದಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ 24 ವಾಹನಗಳು ಬಂದಿವೆ. ಈ ವಾಹನಗಳನ್ನು ಒಮ್ಮೆ ಚಾರ್ಜ್ ಮಾಡಿದರೆ 90 ಕಿ.ಮೀ. ಕ್ರಮಿಸಬಹುದು. ಒಮ್ಮೆಗೆ 300 ಕೆಜಿ ಒಣ ಅಥವಾ ಹಸಿ ಕಸ ಸಂಗ್ರಹ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಮಾಲಿನ್ಯರಹಿತ ವಾಹನಗಳನ್ನು ಕಸ ಸಂಗ್ರಹಕ್ಕೆ ಬಳಸುವ ಮೂಲಕ ಮಂಗಳೂರು ಮಹಾನಗರ ಪಾಲಿಕೆ ದಿಟ್ಟ ಹೆಜ್ಜೆ ಇಟ್ಟಿದೆ. ಕೇಂದ್ರ, ರಾಜ್ಯ ಮತ್ತು ಮನಪಾ ಅನುದಾನದಿಂದ ಬ್ಯಾಟರಿ ಚಾಲಿತ ಆಟೋ ಖರೀದಿಸಲಾಗಿದೆ. ಟೆಂಡರ್ ಪಡೆದುಕೊಂಡ ಪ್ರಗ್ಯಾ ಆಟೋಮೊಬೈಲ್ಸ್ ಉತ್ತಮ ವಾಹನಗಳನ್ನು ಒದಗಿಸಿದೆ. ಈ ಆಟೋ ಗಂಟೆಗೆ 25 ಕಿ.ಮೀ. ಚಲಿಸುತ್ತದೆ. ಸದ್ಯಕ್ಕೆ ಮೂರು ವಾರ್ಡ್ಗಳಿಗೆ ಒಂದರಂತೆ ಓಣಿ ಇರುವ ಪ್ರದೇಶಗಳಲ್ಲಿ ಹಸಿ, ಒಣ ಕಸ ಸಂಗ್ರಹಕ್ಕೆ ಈ ವಾಹನಗಳನ್ನು ಬಳಸಲಾಗುವುದು. ಕಿ.ಮೀ.ಗೆ 40 ಪೈಸೆ ಮಾತ್ರ ವೆಚ್ಚವಾಗುತ್ತದೆ. ಮಾಲಿನ್ಯ ರಹಿತ ಮಂಗಳೂರು ಹಾಗೂ ಸ್ವಚ್ಛತೆಯಲ್ಲಿ ಮಂಗಳೂರನ್ನು ನಂ.1 ಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಶಾಸಕ ಡಾ.ವೈ. ಭರತ್ ಶೆಟ್ಟಿ, ಉಪ ಮೇಯರ್ ಸುನೀತಾ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್ಕುಮಾರ್, ಗಣೇಶ್ ಕುಲಾಲ್, ಲೋಹಿತ್ ಅಮೀನ್, ವರುಣ್ ಚೌಟ, ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಸ್ಥಳೀಯ ಕಾರ್ಪೋರೇಟರ್ ದಿವಾಕರ ಪಾಂಡೇಶ್ವರ, ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಪ್ರಗ್ಯಾ ಆಟೋಮೊಬೈಲ್ಸ್ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಸುರಾನ ಉಪಸ್ಥಿತರಿದ್ದರು.

ಮನಪಾ ಸಚೇತಕ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಈ ವೇಳೆ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಿಸಲಾಯಿತು. ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News