ಮಂಗಳೂರು: ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಚಳಿಗಾಲದ ವೇಳಾಪಟ್ಟಿ
► ಅ. 27ರಿಂದ ಮಂಗಳೂರಿನಿಂದ ದಿಲ್ಲಿ, ತಿರುವನಂತಪುರಕ್ಕೆ ಹೊಸ ವಿಮಾನ ► ದಮ್ಮಾಮ್, ದೋಹಾ, ಕುವೈತ್, ಜಿದ್ದಾ, ಬಹರೈನ್‌ಗೆ ಸಾಪ್ತಾಹಿಕ ವಿಮಾನಗಳ ಸಂಚಾರ ಹೆಚ್ಚಳ
ಮಂಗಳೂರು, ಅ.25: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಅ.26 ರಿಂದ ಪ್ರಾರಂಭವಾಗುವ ವಿಮಾನದ 2025ರ ಚಳಿಗಾಲದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ತಮ್ಮ ಕಾರ್ಯಾಚರಣೆಯ ಯೋಜನೆಗಳನ್ನು ದೃಢಪಡಿಸಿದ್ದು, ಇದು ಮಾರ್ಚ್ 28, 2026ರವರೆಗೆ ಮುಂದುವರಿಯಲಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅ. 27ರಿಂದ ಹೊಸದಿಲ್ಲಿಗೆ ಮತ್ತು ಅಲ್ಲಿಂದ ಎರಡನೇ ದೈನಂದಿನ ವಿಮಾನವನ್ನು (ಐಎಕ್ಸ್ 1781/ ಐಎಕ್ಸ್ 1782) ಪರಿಚಯಿಸಲಿದೆ. ಈಗಾಗಲೇ ಮಂಗಳೂರು-ಹೊಸದಿಲ್ಲಿ ವಿಮಾನಕ್ಕೆ (ಐಎಕ್ಸ್ 1275/ ಐಎಕ್ಸ್ 1276ಗೆ) ಪೂರಕವಾಗಲಿದೆ. ಬೆಂಗಳೂರಿಗೆ ದೈನಂದಿನ ಎರಡು ವಿಮಾನಗಳು ಮತ್ತು ಮುಂಬೈಗೆ ಒಂದು ವಿಮಾನ ಸಂಚಾರ ಮುಂದುವರಿಯಲಿದೆ.
ಮಂಗಳೂರಿನಿಂದ ತಿರುವನಂತಪುರಕ್ಕೆ ವಾರದಲ್ಲಿ ಮೂರು ನೇರ ವಿಮಾನಗಳು (ಐಎಕ್ಸ್ 5531) ಇದೇ ಮೊದಲ ಬಾರಿಗೆ ಸಂಚಾರವನ್ನು ಅ.27ರಿಂದ ಆರಂಭಿಸಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು , ವಿಮಾನ (ಐಎಕ್ಸ್ 5532) ತಿರುವನಂತಪುರಂನಿಂದ ಮಂಗಳೂರಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಸಂಚರಿಸಲಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಎರಡು ವಿಮಾನಗಳು ಮಂಗಳೂರಿನಿಂದ ದುಬೈಗೆ ಓಡಾಟ ಆರಂಭಿಸಲಿದೆ ಮತ್ತು ಒಂದು ವಿಮಾನ ಪ್ರತಿ ಮಂಗಳವಾರ ಓಡಾಡಲಿದೆ. ಮಂಗಳೂರಿನಿಂದ ಅಬುಧಾಬಿಗೆ ಒಂದು ದೈನಂದಿನ ವಿಮಾನ, ವಾರದಲ್ಲಿ ಐದು ದಮ್ಮಾಮ್‌ಗೆ ಮತ್ತು ವಾರದಲ್ಲಿ ಮೂರು ಬಹರೈನ್, ದೋಹಾ, ಜಿದ್ದಾ ಮತ್ತು ಕುವೈತ್‌ಗೆ ಓಡಾಡಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನಗಳು ದಮ್ಮಾಮ್‌ಗೆ ವಾರದಲ್ಲಿ 4 ದಿನಗಳು ಮತ್ತು ದೋಹಾಗೆ ಎರಡು ಬಾರಿ ಓಡಾಡುತ್ತಿವೆ. ಇದೀಗ ಇನ್ನೊಂದು ವಿಮಾನ ಹಾರಾಟ ಆರಂಭಿಸಲಿದೆ. ಮಂಗಳೂರಿನಿಂದ ಬಹರೈನ್, ಕುವೈತ್ ಮತ್ತು ಜಿದ್ದ್ಡಾಗೆ ಇದೀಗ ಒಂದು ವಿಮಾನ ಇದೆ. ಮುಂದೆ ಎರಡು ವಿಮಾನಗಳು ಸಂಚಾರ ಆರಂಭಿಸಲಿದೆ. ಮಂಗಳೂರಿನಿಂದ ಬೆಂಗಳೂರಿಗೆ ಇಂಡಿಗೊ ಸಂಸ್ಥೆಯ ಆರು ದೈನಂದಿನ ವಿಮಾನಗಳು ಓಡಾಡಲಿದೆ. ಮುಂಬೈಗೆ ಮೂರು, ಹೈದರಾಬಾದ್‌ಗೆ ಎರಡು ಮತ್ತು ದಿಲ್ಲಿ ಮತ್ತು ಚೆನ್ನೈಗೆ ತಲಾ ಒಂದು ವಿಮಾನ ಓಡಾಡಲಿದೆ. ವಿಮಾನಯಾನ ಸಂಸ್ಥೆಯು ಹೈದರಾಬಾದ್ ಮತ್ತು ಚೆನ್ನೈಗೆ 72 ಆಸನಗಳ ಎಟಿಆರ್ ವಿಮಾನಗಳನ್ನು ಮತ್ತು ಇತರ ಮೂರು ದೇಶೀಯ ತಾಣಗಳಿಗೆ ಏರ್‌ಬಸ್ 320/321 ವಿಮಾನಗಳನ್ನು ನಿಯೋಜಿಸಲಿದೆ.
ಮಂಗಳೂರಿನಿಂದ ಅಬುಧಾಬಿಗೆ ದಿನನಿತ್ಯ ಒಂದು ಮತ್ತು ದುಬೈಗೆ ವಾರದಲ್ಲಿ 4 ವಿಮಾನಗಳ ಹಾರಾಟ ಇರುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.