Mangaluru | ಪಿಲಿಕುಳ ಗಾಲ್ಫ್ ಕ್ಲಬ್‌ನಲ್ಲಿ ಫ್ಲಡ್‌ಲೈಟ್ ಟೂರ್ನಮೆಂಟ್; ವಿಶ್ವದರ್ಜೆಯ ಪ್ರೊ- ಆ್ಯಮ್ ಆಟಗಾರರ ಸಮಾಗಮ
ಮಂಗಳೂರು : ಪಿಲಿಕುಳದ ಗಾಲ್ಫ್ ಕ್ಲಬ್‌ನಲ್ಲಿ ಆಯೋಜಿಸಲಾಗಿರುವ (ಪ್ರೊಫೆಶನಲ್ ಅಮೆಚೂರ್) ಗಾಲ್ಫ್ ಟೂರ್ನಮೆಂಟ್‌ಗಾಗಿ ಮಂಗಳೂರಿಗೆ ದೇಶದ ವಿವಿಧ ಭಾಗಗಳಿಂದ ವಿಶ್ವದರ್ಜೆಯ ವೃತ್ತಿಪರ ಗಾಲ್ಫ್ ಆಟಗಾರರು ಆಗಮಿಸಿದ್ದಾರೆ ಎಂದು ಕ್ಲಬ್‌ನ ಕ್ಯಾಪ್ಟನ್ ಮನೋಜ್ ಶೆಟ್ಟಿ ತಿಳಿಸಿದರು.
ಪಿಲಿಕುಳ ಗಾಲ್ಫ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶ್ವದರ್ಜೆಯ ವೃತ್ತಿಪರ ಆಟಗಾರರಾದ ಅಮನ್‌ರಾಜ್, ಆರ್ಯನ್ ರೂಪ ಆನಂದ್, ದಿವ್ಯಾಂಶು ಬಜಾಜ್, ಧರ್ಮ, ಅಲಾಪ್ ಐ.ಎಲ್., ಯಶಸ್ ಚಂದ್ರ ಎಂ.ಎಸ್., ಉದಯನ್ ಮಾನೆ, ಖಾಲಿನ್ ಜೋಶಿ, ಸ್ನೇಹಾ ಸಿಂಗ್, ಅವನಿ ಪ್ರಶಾಂತ್, ಚಿಕ್ಕರಂಗಪ್ಪ ಎಸ್. ಮತ್ತು ಸಮರ್ಥ್ ದ್ವಿವೇದಿ ಮಂಗಳೂರಿನ ಗಾಲ್ಫ್ ಕ್ಲಬ್‌ಗೆ ಆಗಮಿಸುವ ಮೂಲಕ ಅಮೆಚೂರ್ ಆಟಗಾರರಿಗೆ ಹೊಸ ಹುರುಪು ದೊರಕಿದೆ ಎಂದರು. ವಿಶ್ವದರ್ಜೆಯ ಈಜುಕೊಳ, ಬ್ಯಾಡ್ಮಿಂಟನ್ ಕ್ರೀಡಾಂಗಣದ ಜತೆಗೆ ಇದೀಗ ಮಂಗಳೂರಿನಲ್ಲಿ ವಿಶ್ವದರ್ಜೆಯ ಫ್ಲೆಡ್‌ಲೈಟ್ ವ್ಯವಸ್ಥೆಯ ಗಾಲ್ಫ್ ಕ್ಲಬ್ ಮೂಲಕ ಮಂಗಳೂರು ಕ್ರೀಡಾ ಕ್ಷೇತ್ರದಲ್ಲಿಯೂ ದಾಪುಗಲಿಡುತ್ತಿದೆ ಎಂದವರು ಹೇಳಿದರು.
ವಿಶ್ವದರ್ಜೆಯ ಆಟಗಾರರಿಗೆ ಪೂರಕವಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಗಾಲ್ಫ್ ಮೈದಾನದಲ್ಲಿ ಕಲ್ಪಿಸಲಾಗಿದೆ. ದೇಶದ ನಾಲ್ಕು ಕಡೆಗಳಲ್ಲಿ ಮಾತ್ರವೇ ಫ್ಲಡ್‌ಲೈಟ್ ಗಾಲ್ಫ್ ಕ್ಲಬ್ ವ್ಯವಸ್ಥೆ ಇದ್ದು, ದಕ್ಷಿಣ ಭಾರತದಲ್ಲಿ ಮಂಗಳೂರಿನಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ವಿಶ್ವದರ್ಜೆಯ ವೃತ್ತಿಪರ ಅಮೆಚೂರ್ ಆಟಗಾರರಾದ ಚಿಕ್ಕರಂಗಪ್ಪ ಮಾತನಾಡಿ, ಮಂಗಳೂರಿನಲ್ಲಿ ಗಾಲ್ಫ್ ಕ್ರೀಡೆ ಬೆಳವಣಿಗೆಯಲ್ಲಿ ಈ ಅತ್ಯಾಧುನಿಕ ಸೌಲಭ್ಯದ ಪಿಲಿಕುಳ ಗಾಲ್ಫ್ ಕ್ರೀಡಾಂಗಣ ಯುವ ಪ್ರತಿಭೆಗಳಿಗೆ ಉತ್ತೇಜನ ನೀಡಲಿದೆ ಎಂದರು.
ಶಾಲಾ ಮಕ್ಕಳನ್ನು ಈ ಕ್ರೀಡೆಯತ್ತ ಆಕರ್ಷಿಸಲು ಹೆಚ್ಚಿನ ಉತ್ತೇಜನ ನೀಡುವಲ್ಲಿ ಹೊನಲು ಬೆಳಕಿನ ವ್ಯವಸ್ಥೆಯ ಈ ಕ್ರೀಡಾಂಗಣ ನೆರವಾಗಬೇಕು ಎಂದು ಅಲಾಪ್ ಅವರು ಅಭಿಪ್ರಾಯಪಟ್ಟರು.
ಗೋಷ್ಟಿಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಪ್ರೊ ಗಾಲ್ಫ್ ಆಟಗಾರರ ಜತೆಗೆ ಗಿರೀಶ್ ರಾವ್, ನಿತಿನ್ ಶೆಟ್ಟಿ, ಗೌತಮ್ ಪಡಿವಾಳ ಮೊದಲಾದವರು ಉಪಸ್ಥಿತರಿದ್ದರು.
ಮಾರ್ಚ್ 31ರೊಳಗೆ ಗಾಲ್ಫ್ ಅಕಾಡೆಮಿ ಸಿದ್ಧ
ಪಿಲಿಕುಳ ಗಾಲ್ಫ್ ಕ್ಲಬ್‌ನ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ನಿರ್ದೇಶನದ ಮೇರೆಗೆ ಕರಾವಳಿ ಉತ್ಸವದ ಸಮಾರೋಪದ ಭಾಗವಾಗಿ ಶನಿವಾರ (ಜ. 31)ದಂದು ಹೊನಲು ಬೆಳಕಿನ ಗಾಲ್ಫ್ ಪಂದ್ಯಾಟ ನಡೆಯಲಿದೆ. ಇದೇ ವೇಳೆ ಗಾಲ್ಫ್ ಕೋರ್ಸ್‌ನಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಮೈಕಲ್ ಡಿಸೋಜಾ ಮತ್ತು ಫ್ಯಾಮಿಲಿ ಪ್ರಾಯೋಜಿತ ಗಾಲ್ಫ್ ಅಕಾಡೆಮಿ ನಿರ್ಮಾಣವಾಗುತ್ತಿದ್ದು ಮಾರ್ಚ್ 31ಕ್ಕೆ ಪೂರ್ಣಗೊಳ್ಳಲಿದೆ. ಗಾಲ್ಫ್ ಕ್ರೀಡೆಯ ತರಬೇತಿಗಾಗಿ ದೇಶದ ವಿವಿಧ ಭಾಗಗಳ ನುರಿತ ಗಾಲ್ಫ್ ಅಕಾಡೆಮಿಗಳ ಪ್ರಮುಖರ ಸಹಕಾರದಲ್ಲಿ ರೂಪುರೇಷೆಯನ್ನು ಸಿದ್ಧಗೊಳಿಸಲು ತೀರ್ಮಾನಿಸಲಾಗಿದೆ. ಇದು ಕೇವಲ ತರಬೇತಿ ಕೇಂದ್ರ ಮಾತ್ರ ಆಗಿರದೆ, ಗಾಲ್ಫ್ ಎಕ್ಸೆಲೆನ್ಸ್ ಅಕಾಡೆಮಿಯಾಗಿ ರೂಪುಗೊಳ್ಳಲಿದೆ ಎಂದು ಪಿಲಿಕುಳ ಗಾಲ್ಫ್ ಕ್ಲಬ್‌ನ ಕ್ಯಾಪ್ಟನ್ ಮನೋಜ್ ಶೆಟ್ಟಿ ತಿಳಿಸಿದರು.
‘ವೈಯಕ್ತಿಕ ಕ್ರೀಡೆಯಾಗಿರುವ ಗಾಲ್ಫ್ ನಲ್ಲಿಯೂ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇದೊಂದು ಆಕರ್ಷಕ ಆಟ’ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಪ್ರೊ ಗಾಲ್ಫ್ ಆಟಗಾರ್ತಿ, ಬೆಂಗಳೂರು ಮೂಲದ ಅವನಿ ಪ್ರಶಾಂತ್ ಅಭಿಪ್ರಾಯಪಟ್ಟರು.
‘ನನ್ನ ತಂದೆ ಗಾಲ್ಫ್ ಕ್ರೀಡಾಪಟುವಾಗಿದ್ದು, ಪ್ರಸಕ್ತ ಕೋಚ್ ಆಗಿದ್ದಾರೆ. ನಾನು ಸಣ್ಣದರಿಂದಲೇ ಗಾಲ್ಫ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೇನೆ. ಕ್ರಿಕೆಟ್‌ನಂತೆ ಗಾಲ್ಫ್ ಕೂಡಾ ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಆಟವಾಗಿ ರೂಪುಗೊಳ್ಳುತ್ತಿದೆ’ ಎನ್ನುತ್ತಾರೆ ಹೈದರಾಬಾದ್‌ನ ಪದವಿ ವಿದ್ಯಾರ್ಥಿನಿ ಹಾಗೂ ಪ್ರೊ ಗಾಲ್ಫ್ ಆಟಗಾರ್ತಿ ಆಗಿರುವ ಸ್ನೇಹಾ ಸಿಂಗ್.